ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆಯಲ್ಲಿ 1.57 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿದ ಪ್ರಕರಣದಲ್ಲಿ ಕೇರ್‌ಟೇಕರ್ ಉದ್ಯೋಗಿಯಾಗಿದ್ದ ಉಮಾ ಎಂಬ ಮಹಿಳೆ ಚಾಮರಾಜಪೇಟೆ ಪೊಲೀಸರ ಕೈಗೆ ಬಿದ್ದಿದ್ದಾಳೆ. ಮನೆಯೊಂದರಲ್ಲಿ ರೋಗಿಯನ್ನು ನೋಡಿಕೊಳ್ಳಲು ನೇಮಕಗೊಂಡಿದ್ದ ಈ ಮಹಿಳೆ, ವಿಶ್ವಾಸಭಂಗ ಮಾಡಿದ ಬಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.
ಚಾಮರಾಜಪೇಟೆಯ ಉದ್ಯಮಿ ರಾಧ ಅವರು ನೀಡಿದ ದೂರಿನಂತೆ, ಅವರು ಕೂಡು ಕುಟುಂಬದಲ್ಲಿ ವಾಸವಿದ್ದು, ತಮ್ಮ ಅಕ್ಕ ಸುಜಾತ ಅವರು ಕಳೆದ 8 ತಿಂಗಳಿನಿಂದ ಗಂಭೀರ ಆರೋಗ್ಯ ಸಮಸ್ಯೆಯಿಂದ ಬೆಡ್ ರಿಡನ್ ಆಗಿದ್ದರಿಂದ ಅವರನ್ನು ನೋಡಿಕೊಳ್ಳಲು ಕೇರ್‌ಟೇಕರ್ ನೇಮಕ ಮಾಡುವ ಅಗತ್ಯವಿತ್ತು. ಈ ಹಿನ್ನೆಲೆ, ಮೂರು ತಿಂಗಳ ಹಿಂದೆ ಉಮಾ ಎಂಬ ಮಹಿಳೆಯನ್ನು ಏಜೆನ್ಸಿಯ ಮುಖಾಂತರ ಕೇರ್‌ಟೇಕರ್ ಆಗಿ ನೇಮಕ ಮಾಡಲಾಯಿತು.
ಸಂಬಂಧಿತ ಮನೆಯಲ್ಲಿನ ಬೀರುವಿನಲ್ಲಿ ಸುಜಾತ ಅವರು ಸೈಟ್ ಮಾರಾಟದಿಂದ ಬಂದ 67 ಲಕ್ಷ ರೂ. ನಗದು ಹಾಗೂ 95 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ಸುರಕ್ಷಿತವಾಗಿ ಇಡಲಾಗಿತ್ತು. ಆದರೆ ಜೂನ್ 9ರಂದು ಈ ಬೀರು ತೆರೆಯಲಾಗುತ್ತಿದ್ದಾಗ ಆ ಹಣ ಹಾಗೂ ಆಭರಣಗಳು ಅಲ್ಲಿಲ್ಲ ಎಂಬದು ತಿಳಿದುಬಂದಿತು.
ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಜೂನ್ 4ರಂದು ಬೆಳಗ್ಗೆ ಉಮಾ ತನ್ನ ಕೈಯಲ್ಲಿ ಬ್ಯಾಗ್ ಹಿಡಿದು ಹೊರಗೆ ಹೋಗಿರುವ ದೃಶ್ಯ ಸೆರೆಯಾಗಿದೆ. ಅದೇ ದಿನ ಸಂಜೆ 6.30ಕ್ಕೆ ಮನೆಗೆ ವಾಪಸ್ಸು ಬಂದಿರುವ ದೃಶ್ಯವಿದೆ. ಮೊದಲಿಗೆ ತನಗೆ ಈ ಬಗ್ಗೆ ಏನೂ ಗೊತ್ತಿಲ್ಲ ಎಂದು ಉಮಾ ಉತ್ತರಿಸಿದರೂ, ನಂತರದ ವಿಚಾರಣೆ ವೇಳೆ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ.
ಚಾಮರಾಜಪೇಟೆ ಪೊಲೀಸರು ಕೇರ್‌ಟೇಕರ್ ಉಮಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಮೊದಲ ಹಂತದ ತನಿಖೆಯಲ್ಲಿ ಅವಳ ಮಗಳ ಮನೆಯಿಂದ ಸುಮಾರು ₹60 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ವಶಪಡಿಸಿದ್ದಾರೆ. ಇನ್ನೂ ಉಳಿದ ನಗದು ಹಾಗೂ ಚಿನ್ನಾಭರಣದ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.














