ಮನೆ ಅಪರಾಧ ಬೆಂಗಳೂರು: ಉಚಿತ ನೀರು ಮಾರಾಟ ಮಾಡಿದ ಖಾಸಗಿ ಟ್ಯಾಂಕರ್ ಚಾಲಕನ ವಿರುದ್ಧ ದೂರು

ಬೆಂಗಳೂರು: ಉಚಿತ ನೀರು ಮಾರಾಟ ಮಾಡಿದ ಖಾಸಗಿ ಟ್ಯಾಂಕರ್ ಚಾಲಕನ ವಿರುದ್ಧ ದೂರು

0

ಬೆಂಗಳೂರು: ಉಚಿತವಾಗಿ ಪೂರೈಸಬೇಕಾದ ನೀರನ್ನು ದುರ್ಬಳಕೆ ಮಾಡಿದ ಆರೋಪದಲ್ಲಿ ಖಾಸಗಿ ಟ್ಯಾಂಕರ್ ಚಾಲಕನ ವಿರುದ್ಧ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದೆ.

ನೀರಿನ ತೀವ್ರ ಕೊರತೆ ಎದುರಿಸುತ್ತಿರುವ ಪ್ರದೇಶಗಳಿಗೆ ಉಚಿತವಾಗಿ ನೀರು ಪೂರೈಸುವುದಕ್ಕಾಗಿ ಮಂಡಳಿಯು ಖಾಸಗಿ ಟ್ಯಾಂಕರ್ ಅನ್ನು ತಾತ್ಕಾಲಿಕವಾಗಿ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ಅದರಂತೆ ನೀರು ಪೂರೈಸಲು ಚಾಲಕನಿಗೆ ಸೂಚಿಸಲಾಗಿತ್ತು ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ.

ವಾರ್ಡ್​ ಸಂಖ್ಯೆ 130ರಲ್ಲಿ ನೀರಿನ ತೀವ್ರ ಅಭಾವ ಇರುವುದು ಗೊತ್ತಾಗಿತ್ತು. ಆ ವಾರ್ಡ್‌ ಗೆ ಚಾಲಕ ನೀರು ಸರಬರಾಜು ಮಾಡಬೇಕಾಗಿತ್ತು. ಸೂಚನೆಯನ್ನು ಪಾಲಿಸುವ ಬದಲು ಚಾಲಕ ವಾಣಿಜ್ಯ ಉದ್ದೇಶಕ್ಕಾಗಿ ವಾರ್ಡ್ ಸಂಖ್ಯೆ 14 ರಲ್ಲಿನ ಸಂಸ್ಥೆಗೆ ನೀರನ್ನು ಮಾರಾಟ ಮಾಡಿದ್ದಾರೆ. ಆದ್ದರಿಂದ, ನಾವು ಅವರ ವಿರುದ್ಧ ದೂರು ನೀಡಿದ್ದೇವೆ ಎಂದು ಮಂಡಳಿ ತಿಳಿಸಿದೆ.

ನಗರದಲ್ಲಿನ ನೀರಿನ ಕೊರತೆ ನೀಗಿಸಲು ಹಲವು ಖಾಸಗಿ ಟ್ಯಾಂಕರ್‌ ಗಳನ್ನು ನಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದೇವೆ. ಖಾಸಗಿ ಟ್ಯಾಂಕರ್ ​​ಗಳು ನೀರಿನ ದುರ್ಬಳಕೆಯನ್ನು ಮಾಡಿದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ನೀರಿನ ದುರುಪಯೋಗದ ವಿರುದ್ಧ ಎಲ್ಲಾ ಖಾಸಗಿ ಟ್ಯಾಂಕರ್ ಮಾಲೀಕರಿಗೆ ಜಲಮಂಡಳಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ವಿ ಎಚ್ಚರಿಕೆ ನೀಡಿದ್ದಾರೆ.

ಈ ಮಧ್ಯೆ, ಅಂತರ್ಜಲ ಮಟ್ಟವನ್ನು ಸುಧಾರಿಸುವುದಕ್ಕಾಗಿ ಕೆಂಗೇರಿ ಸೇರಿದಂತೆ ನಗರದ 14 ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ಜಲ ಮಂಡಳಿ ಭರ್ತಿ ಮಾಡುತ್ತಿದೆ. ಹೀಗಾಗಿ ಈ ಕೆರೆಗಳ ನೀರನ್ನು ನೇರವಾಗಿ ಬಳಸದಂತೆ ನಾಗರಿಕರಿಗೆ ಜಲ ಮಂಡಳಿ ಎಚ್ಚರಿಕೆ ನೀಡಿದೆ.

ಕೆರೆಗಳನ್ನು ಸಂಸ್ಕರಿಸಿದ ನೀರಿನಿಂದ ತುಂಬಿಸುತ್ತಿರುವಾಗ, ಅದನ್ನು ನೇರ ಬಳಕೆ ಅಥವಾ ಬಳಕೆಗೆ ಬಳಸಲಾಗುವುದಿಲ್ಲ. ಆದ್ದರಿಂದ, ಜನರು ಇದನ್ನು ಬಳಸದಂತೆ ವಿನಂತಿಸಲಾಗಿದೆ ಮಂಡಳಿಯ ಪ್ರಕಟಣೆ ತಿಳಿಸಿದೆ.