ಬೆಂಗಳೂರು: ಬೆಂಗಳೂರಿನ ಕೆಪಿ ಅಗ್ರಹಾರ ಪ್ರದೇಶದಲ್ಲಿ ದಾರುಣ ಘಟನೆ ವರದಿಯಾಗಿದ್ದು, ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಮನನೊಂದು ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತಪಟ್ಟ ವ್ಯಕ್ತಿಯನ್ನು ಗೋವರ್ಧನ್ ಎಂದು ಗುರುತಿಸಲಾಗಿದೆ. ಅವರು ಸುಮಾರು 7 ವರ್ಷಗಳ ಹಿಂದೆ ಪ್ರಿಯಾ ಎಂಬ ಯುವತಿಯೊಂದಿಗೆ ವಿವಾಹವಾಗಿದ್ದರು. ಆದರೆ ವಿವಾಹ ನಂತರವೂ ಪತ್ನಿ ಪ್ರಿಯಾ ಮನೆ ಬಿಟ್ಟು ಆಗಾಗ್ಗೆ ಹೋಗುತ್ತಿದ್ದರೆಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.
ಈ ಹಿಂದೆ ಪ್ರಿಯಾ ಹಲವಾರು ಬಾರಿ ಮನೆಯಿಂದ ಹೊರ ಹೋಗಿದ್ದರೂ, ಕೆಲವು ದಿನಗಳಲ್ಲಿ ವಾಪಸ್ ಮನೆಗೆ ಬಂದಿದ್ದಳು. ಆದರೆ ಕಳೆದ ತಿಂಗಳು ಬಿಟ್ಟು ಹೋಗಿದ್ದ ಬಳಿಕ ಈವರೆಗೆ ವಾಪಸ್ ಆಗಿಲ್ಲ. ಇದರಿಂದಾಗಿ ತೀವ್ರವಾಗಿ ಕುಗ್ಗಿದ ಗೋವರ್ಧನ್, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಗೋವರ್ಧನ್ ಅವರ ಕುಟುಂಬಸ್ಥರು ಈ ಆತ್ಮಹತ್ಯೆಗೆ ಪತ್ನಿ ಪ್ರಿಯಾ ನೇರ ಕಾರಣ ಎಂದು ಆರೋಪಿಸಿದ್ದಾರೆ. ಪ್ರಿಯಾ ಅವರು ಅನೇಕ ಬಾರಿ ಮನೆಯಿಂದ ಹೊರ ಹೋಗುತ್ತಿದ್ದರು, ಇದರಿಂದ ಕುಟುಂಬದಲ್ಲಿ ನಿರಂತರ ಕಲಹ ನಡೆಯುತ್ತಿತ್ತು ಎಂದು ವರದಿಯಾಗಿದೆ. ಗೋವರ್ಧನ್ ಕುಟುಂಬದವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.














