ರಾಮನಗರ(Ramnagar): ಬೆಂಗಳೂರು– ಮೈಸೂರು ನಡುವಿನ ದಶಪಥ ರಾಷ್ಟ್ರೀಯ ಹೆದ್ದಾರಿಯು ಆಗಸ್ಟ್ 15ರಿಂದ ಪ್ರಯಾಣಿಕರ ಬಳಕೆಗೆ ಭಾಗಶಃ ಮುಕ್ತವಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್ ಈ ಮಾಹಿತಿ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಮಾಹಿತಿ ನೀಡಿದ್ದು, ನಿಡಘಟ್ಟದಿಂದ ಬೆಂಗಳೂರಿನ ಕ್ರೈಸ್ಟ್ ಕಾಲೇಜುವರೆಗಿನ ಸುಮಾರು 51 ಕಿ.ಮೀ. ಉದ್ದದ ಹೆದ್ದಾರಿಯ ಒಂದು ಬದಿಯನ್ನು (ಒನ್ ವೇ) ಅಂದು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದರು.
ಸೆಪ್ಟೆಂಬರ್ 2ನೇ ವಾರದೊಳಗೆ ಇನ್ನೊಂದು ಬದಿಯ ಸಂಚಾರಕ್ಕೂ ಅವಕಾಶ ನೀಡಲಾಗುವುದು. ಸೆ. 15ರ ಒಳಗೆ ಬೆಂಗಳೂರಿನ ಮೊದಲ ನಾಲ್ಕು ಕಿ.ಮೀ ಹೆದ್ದಾರಿ ಕಾಮಗಾರಿ ಹೊರತುಪಡಿಸಿ ಉಳಿದ 51 ಕಿ.ಮೀ. ಹೆದ್ದಾರಿಯೂ ಸಂಚಾರಕ್ಕೆ ಮುಕ್ತವಾಗಲಿದೆ. ಮೊದಲಿಗೆ ಆರು ಪಥಗಳ ಎಕ್ಸ್ಪ್ರೆಸ್ ಹೈವೆ ಹಾಗೂ ನಂತರದಲ್ಲಿ ಸರ್ವೀಸ್ ರಸ್ತೆಗಳು ಪ್ರಯಾಣಿಕರಿಗೆ ಮುಕ್ತವಾಗಲಿವೆ ಎಂದು ಮಾಹಿತಿ ನೀಡಿದರು.
ಹೆದ್ದಾರಿ ಪ್ರಯಾಣಕ್ಕೆ ಅವಕಾಶ ನೀಡುವ ಮುನ್ನ ಅದರ ಸುರಕ್ಷತೆಯ ಪರೀಕ್ಷೆ ನಡೆಸಲಾಗುವುದು. ಇನ್ನೆರಡು ದಿನದಲ್ಲಿ ದೆಹಲಿಯ ಅಧಿಕಾರಿಗಳ ತಂಡವು ಹೆದ್ದಾರಿ ಸುರಕ್ಷತೆ ಕುರಿತು ಪರಿಶೀಲನೆ ನಡೆಸಲಿದೆ. ಹೆದ್ದಾರಿ ಮೊದಲ ಹಂತವು ಸಂಚಾರಕ್ಕೆ ಮುಕ್ತ ವಾದರೂ ಪ್ರಯಾಣಿಕರಿಗೆ ಸದ್ಯ ಟೋಲ್ ಹೊರೆ ಬೀಳದು. ಎರಡೂ ಹಂತದ ಕಾಮಗಾರಿಗಳು ಮುಗಿದ ಬಳಿಕವಷ್ಟೇ ಟೋಲ್ ಸಂಗ್ರಹ ಆರಂಭಿಸುವುದಾಗಿ ಅಧಿಕಾರಿಗಳು ವಿವರಿಸಿದರು.