ಮನೆ ರಾಜ್ಯ ಮೈಸೂರು ವಿಶ್ವವಿದ್ಯಾನಿಲಯ: ಆ.11ರಂದು ಯುವಜನ ಮಹೋತ್ಸವ

ಮೈಸೂರು ವಿಶ್ವವಿದ್ಯಾನಿಲಯ: ಆ.11ರಂದು ಯುವಜನ ಮಹೋತ್ಸವ

0

ಮೈಸೂರು(Mysuru): ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 11ರಂದು ಯುವಜನ ಮಹೋತ್ಸವ ಮತ್ತು ವಿವಿ ಎಂಜಿನಿಯರಿಂಗ್ ಕಾಲೇಜು ಹಾಗೂ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ನಗರದ ಕ್ರಾಫರ್ಡ್ ಹಾಲ್‌ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಅಂದು ಬೆಳಿಗ್ಗೆ 11 ಗಂಟೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ  ಆಯೋಜಿಸಲಾಗಿರುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ನಟ ಯಶ್, ಸಂಸದರಾದ ಪ್ರತಾಪಸಿಂಹ, ವಿ.ಶ್ರೀನಿವಾಸ ಪ್ರಸಾದ್, ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ ಮಹೇಶ್ ಭಾಗವಹಿಸಲಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಂದ ಸಂಗೀತ ಕಾರ್ಯಕ್ರಮ ಇರಲಿದೆ ಎಂದರು.

ಕಾರ್ಯಕ್ರಮದ ವಿವರ: ಸ್ಕೂಲ್ ಆಫ್ ಎಂಜಿನಿಯರಿಂಗ್ ಕಾಲೇಜಿನ ತಂತ್ರಜ್ಞಾನ ಭವನದ ಕಟ್ಟಡ, ಕೋರ್ಸ್‌ ಗಳು ಹಾಗೂ ವಿದ್ಯಾರ್ಥಿನಿಲಯ, ಈ ವಿಶ್ವವಿದ್ಯಾನಿಲಯದ ಫಾರ್ಮಸಿ ಕಾಲೇಜು ಕಟ್ಟಡ, ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸುವರ್ಣ ಮಹೋತ್ಸವ ಕಟ್ಟಡ, ಭೂಗೋಳಶಾಸ್ತ್ರ ಮತ್ತು ಭೂವಿಜ್ಞಾನ ವಿಭಾಗಗಳ ವಿಸ್ತರಿಸಿದ ಮೊದಲನೇ ಮಹಡಿ ಕಟ್ಟಡ, ಗಣಕ ವಿಜ್ಞಾನ ಅಧ್ಯಯನ ವಿಭಾಗದ ನವೀಕೃತ ಸಭಾಂಗಣ,  ಪ್ರಾಚ್ಯವಿದ್ಯಾ ಸಂಶೋಧನಾಲಯ ಮತ್ತು ಮಿಥಿಕ್ ಸೊಸೈಟಿ ಕಾರ್ಯಕ್ರಮ ಹಾಗೂ ಗ್ರಹನಿಧಿ ಕೃತಿ ಬಿಡುಗಡೆ, ಬಸವೇಶ್ವರ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಕಟ್ಟಡ ಉದ್ಘಾಟನೆ, ವಿಶ್ವಕೋಶ 8 ಮತ್ತು 9ನೇ ಸಂಪುಟ ಅನಾವರಣ, ಸೆಂಟರ್ ಆಫ್ ಎಕ್ಸಲೆನ್ಸ್, ಸ್ಯಾಪ್, ಐಐಎಂ ಮತ್ತು ಇಸಿ (ವೃತ್ತಿ ಆಧಾರಿತ ಮತ್ತು ಕೌಶಲ್ಯ ಅಭಿವೃದ್ಧಿ ಕೋರ್ಸುಗಳ ಉದ್ಘಾಟನೆ ನೆರವೇರಲಿದೆ. ಎರಡು ಕಾರ್ಯಕ್ರಮವನ್ನು ಸಿಎಂ ನೆರವೇರಿಸಲಿದ್ದು, ಉಳಿದವುಗಳನ್ನು ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಕುಲಸಚಿವ ಪ್ರೊ.ಆರ್.ಶಿವಪ್ಪ ಇದ್ದರು.

ಹಿಂದಿನ ಲೇಖನಆ.15ರಿಂದ ಬೆಂಗಳೂರು- ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿ ಬಳಕೆಗೆ ಭಾಗಶಃ ಮುಕ್ತ
ಮುಂದಿನ ಲೇಖನಕಾರು ಅಪಘಾತದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಅಂಪೈರ್ ರೂಡಿ ಕರ್ಟ್ಜೆನ್ ನಿಧನ