ಬೆಂಗಳೂರು: ಆರೋಪಿತನಲ್ಲದ ವ್ಯಕ್ತಿ ಮೇಲೆ ತಮ್ಮ ಕೆಳ ಹಂತದ ಸಿಬ್ಬಂದಿ ಜತೆ ಸೇರಿ ಹಲ್ಲೆ ನಡೆಸಿದ ಪಿಎಸ್‌ಐ ವಿರುದ್ಧ ತನಿಖೆ ಪೂರ್ಣಗೊಳಿಸಿದ ರಾಜ್ಯ ಮಾನವ ಹಕ್ಕುಗಳ ಆಯೋಗ, ಸಂತ್ರಸ್ತನಿಗೆ ಒಂದು ತಿಂಗಳ ಒಳಗಾಗಿ ಪರಿಹಾರವಾಗಿ 2 ಲಕ್ಷ ರೂ. ನೀಡಬೇಕು ಎಂದು ರಾಜ್ಯ ಸರ್ಕಾರದ ಒಳಾಡಳಿತ ಇಲಾಖೆಗೆ ಶಿಫಾರಸು ಮಾಡಿದೆ.
ಕೆ.ಟಿ.ಸತೀಶ್ ಆರೋಪಿತ ಪಿಎಸ್‌ಐ. ಜೋಲಿ ಮೊಹಲ್ಲಾ ನಿವಾಸಿ ಸುನೀಲ್ ಕುಮಾರ್ ಎಂಬುವರ ಕಚೇರಿಗೆ ನುಗ್ಗಿ ಪಾರ್ಸೆಲ್ ಸರ್ವೀಸ್ ಬಗ್ಗೆ ವಿಚಾರಣೆ ನಡೆಸಿ ಆತನ ಮೇಲೆ ತಮ್ಮ ಸಿಬ್ಬಂದಿ ಜತೆ ಸೇರಿ ಹಲ್ಲೆ ನಡೆಸಿದ್ದರು. ಬಳಿಕ ಈತ ತಮಗೆ ಬೇಕಾಗಿರುವ ವ್ಯಕ್ತಿ ಅಲ್ಲ ಎಂದು ತಿಳಿದು, ಆತನನ್ನು ಕಳುಹಿಸಿದ್ದರು. ಈ ಸಂಬಂಧ ಸುನೀಲ್ ಕುಮಾರ್, ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು.
ಈ ಸಂಬಂಧ ಸುಮಾರು ಎರಡೂವರೆ ವರ್ಷಗಳ ಕಾಲ ಸುದೀರ್ಘ ತನಿಖೆ ನಡೆಸಿದ ರಾಜ್ಯ ಮಾನವ ಹಕ್ಕುಗಳ ಆಯೋಗ, ಇದೀಗ ಪಿಎಸ್‌ಐ ಅಧಿಕಾರ ದುರ್ಬಳಕೆ ಹಾಗೂ ಅಮಾಯಕ ವ್ಯಕ್ತಿ ಮೇಲೆ ಹಲ್ಲೆ ನಡೆಸಿರುವುದು ಸಾಬೀತಾಗಿದೆ ಎಂದು ವರದಿಯಲ್ಲಿ ಉಲ್ಲೇಖೀಸಿದೆ.
ಜತೆಗೆ ಪಿಎಸ್‌ಐ ವಿರುದ್ಧ ಇಲಾಖಾ ತನಿಖೆ ನಡೆಸಿ, ಬಳಿಕ ಪರಿಹಾರ ರೂಪದಲ್ಲಿ ನೀಡುವ 2 ಲಕ್ಷ ರೂ. ಪಿಎಸ್‌ಐ ವೇತನದಿಂದ ವಸೂಲಿ ಮಾಡ ಬೇ ಕೆಂದು ಶಿಫಾರಸು ಪತ್ರದಲ್ಲಿ ತಿಳಿಸಿದೆ. ಜತೆಗೆ ಇಲಾಖೆ ವಿಚಾರಣೆ ನಡೆಸಿದ ಬಳಿಕ ಅನುಪಾಲನಾ ವರದಿ ಯನ್ನು ಒಂದು ತಿಂಗಳೊಳಗೆ ಸಲ್ಲಿಸಬೇಕೆಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಆಯೋಗವು ನಿರ್ದೇಶಿಸಿದೆ.
ಏನಿದು ಘಟನೆ?: 2021ರಲ್ಲಿ ಬಸವೇಶ್ವರನಗರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿಎಸ್‌ಐ ಕೆ.ಟಿ. ಸತೀಶ್ ಮತ್ತು ತಂಡ ಪ್ರಕರಣವೊಂದರಲ್ಲಿ ಸುನೀಲ್ ಎಂಬಾತನಿಗಾಗಿ ಶೋಧ ನಡೆಸುತ್ತಿತ್ತು. ಈ ವೇಳೆ ಜೋಲಿ ಮೊಹಲ್ಲಾ ನಿವಾಸಿಯಾಗಿರುವ ಸುನೀಲ್ ಕುಮಾರ್ ಅವರನ್ನೇ ತಾನು ಹುಡುಕುತ್ತಿರುವ ವ್ಯಕ್ತಿ ಎಂದು ತಪ್ಪಾಗಿ ಭಾವಿಸಿದ್ದ ಪಿಎಸ್‌ಐ, ಆತ ಕೆಲಸ ಮಾಡುತ್ತಿದ್ದ ಪಾರ್ಸೆಲ್ ಕಚೇರಿಗೆ ಇಬ್ಬರು ಕಾನ್ ಸ್ಟೇಬಲ್‌ರೊಂದಿಗೆ ಹೋಗಿ ಆತನನ್ನು ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿ ಗಾಯಗೊಳಿಸಿದ್ದರು. ಬಳಿಕ ತಾನು ಶೋಧಿಸುತ್ತಿರುವ ವ್ಯಕ್ತಿ ಈತನಲ್ಲ ಎಂಬುದು ಗೊತ್ತಾಗಿ, ವಾಪಸ್ ಕಳುಹಿಸಿದ್ದರು.