ಮನೆ ರಾಜ್ಯ ಬೆಂಗಳೂರು ಕಾಲ್ತುಳಿತ ಪ್ರಕರಣ: ಸಿಎಂ, ಡಿಸಿಎಂ ವಿರುದ್ಧ ಕ್ರಮಕ್ಕೆ ಹರತಾಳು ಹಾಲಪ್ಪ ಆಗ್ರಹ

ಬೆಂಗಳೂರು ಕಾಲ್ತುಳಿತ ಪ್ರಕರಣ: ಸಿಎಂ, ಡಿಸಿಎಂ ವಿರುದ್ಧ ಕ್ರಮಕ್ಕೆ ಹರತಾಳು ಹಾಲಪ್ಪ ಆಗ್ರಹ

0

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜೂನ್ 4ರಂದು ನಡೆದ ಭೀಕರ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಇದೀಗ ರಾಜಕೀಯದಲ್ಲಿ ತೀವ್ರ ಸ್ವರೂಪ ತಾಳಿದೆ. ಈ ದುರಂತ ಸರಕಾರದ ವೈಫಲ್ಯದಿಂದ ಉಂಟಾದ “ಸರ್ಕಾರಿ ಪ್ರಾಯೋಜಿತ ಕೊಲೆ” ಎಂದು ಘೋಷಿಸಿದ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ಈ ಬಗ್ಗೆ ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಸರ್ಕಾರ ನುಣುಚಿಕೊಳ್ಳಲು ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿದೆ. ಮೊದಲು ಸಿಎಂ, ಡಿಸಿಎಂ ವಿರುದ್ಧ ಕ್ರಮ ಆಗಬೇಕು ಎಂಬುದಾಗಿ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಆಗ್ರಹಿಸಿದ್ದಾರೆ.

ಪತ್ರಿಕಾ ಪ್ರಕಟಣೆ ಮೂಲಕ ಮಾತನಾಡಿರುವ ಹರತಾಳು ಹಾಲಪ್ಪ, ಕಾಲ್ತುಳಿತದಿಂದ 11 ಮಂದಿ ಪ್ರಾಣ ಕಳೆದುಕೊಂಡಿರುವ ಈ ಹೃದಯವಿದ್ರಾವಕ ಘಟನೆ ನಾಡಿನ ಎಲ್ಲರ ಮನಸ್ಸನ್ನು ಘಾಸಿಗೊಳಿಸಿದೆ. ಪೊಲೀಸರು ಈ ಹಿಂದೆಯೇ ಈ ರೀತಿಯ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದೆಂದು ಎಚ್ಚರಿಕೆ ನೀಡಿದರೂ, “ಚೀಪ್ ಪಾಪ್ಯುಲಾರಿಟಿ”ಗಾಗಿ ಸರ್ಕಾರ ಜನಜಾತ್ರೆ ನಡೆಸಿದ ಪರಿಣಾಮವೇ ಈ ದುರಂತ ಎಂಬುದಾಗಿ ಅವರು ಆರೋಪಿಸಿದರು.

ಅಧಿಕಾರಿಗಳ ಮೇಲೆ ಮಾತ್ರ ಜವಾಬ್ದಾರಿಯನ್ನು ಹಾಕಿ ಸರಕಾರ ತನ್ನ ತಪ್ಪು ಮುಚ್ಚಮರೆ ಮಾಡುವ ಯತ್ನದಲ್ಲಿ ತೊಡಗಿದೆ ಎಂದು ಅವರು ಕಿಡಿಕಾರಿದರು. ವಿಶೇಷವಾಗಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ಡಿಸಿಪಿ ಶೇಖರ್ ಮತ್ತು ಆಡಿಷನಲ್ ಕಮಿಷನರ್ ವಿಕಾಸ್ ಕುಮಾರ್ ಅವರನ್ನು ಅಮಾನತುಗೊಳಿಸಿರುವ ಕ್ರಮವನ್ನು ಅವರು ತೀವ್ರವಾಗಿ ವಿರೋಧಿಸಿದರು.

“ಇವರು ಎಲ್ಲರೂ ಪ್ರಾಮಾಣಿಕ, ನಿಸ್ವಾರ್ಥ ಹಾಗೂ ದಕ್ಷ ಅಧಿಕಾರಿಗಳು. ದಯಾನಂದ್ ಪೊಲೀಸ್ ವಿಭಾಗದಲ್ಲಿ ಬಹುಮಾನಾನ್ವಿತ ಹಾಗೂ ಅತ್ಯಂತ ಉತ್ತಮ ಸೇವಾ ದಾಖಲೆಯುಳ್ಳ ಅಧಿಕಾರಿ. ಶೇಖರ್ ಅವರು ಶಿವಮೊಗ್ಗದಲ್ಲಿ ಎಸ್ಪಿಯಾಗಿ ಪರಿಣಾಮಕಾರಿ ಸೇವೆ ಸಲ್ಲಿಸಿದ್ದವರು. ವಿಕಾಸ್ ಕುಮಾರ್ ನನ್ನೊಂದಿಗೆ ಎಂಎಸ್ಐಎಲ್‌ನಲ್ಲಿ ಕಾರ್ಯನಿರ್ವಹಿಸಿದವರು; ಎಂದು ಅವರು ನೆನಪಿಸಿದರು.

ಹೀಗೆ ಒಳ್ಳೆಯ ಅಧಿಕಾರಿಗಳ ಮೇಲೆ ದಂಡನೆಯ ಕ್ರಮ ತೆಗೆದುಕೊಳ್ಳುವುದು ಖಂಡನೀಯ ಹಾಗೂ ಅನ್ಯಾಯವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಹೇಳಿಕೆಯಲ್ಲಿ ಅವರು, “ಕ್ರಮ ಆಗಬೇಕಾದವರು ಅಧಿಕಾರಿಗಳು ಅಲ್ಲ; ಈ ಅವಿವೇಕಪೂರ್ಣ ನಿರ್ಧಾರ ತೆಗೆದುಕೊಂಡ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ. ಅವರೇ ಈ ಅವ್ಯವಸ್ಥೆಯ ಮೂಲ ಕಾರಣ. ಆದ್ದರಿಂದ ಮೊದಲು ಅವರ ವಿರುದ್ಧ ಕ್ರಮ ಆಗಬೇಕು, ಅವರು ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದರು.

ಸರ್ಕಾರ ಅಧಿಕಾರಿಗಳ ಅಮಾನತು ಆದೇಶವನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಅವರು ಎಚ್ಚರಿಸಿದರು. ಇಲ್ಲದಿದ್ದರೆ, ಜನತೆಯೇ ಸಿಎಂ ಹಾಗೂ ಡಿಸಿಎಂ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹರತಾಳು ಹಾಲಪ್ಪ ತೀವ್ರ ಎಚ್ಚರಿಕೆ ನೀಡಿದರು.