ಮನೆ ಕಾನೂನು ಬೆಂಗಳೂರು ಕಾಲ್ತುಳಿತ ಪ್ರಕರಣ: ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆಗಳ ಸುರಿಮಳೆ : ತನಿಖೆಗೆ ಆದೇಶ, ವರದಿ ಸಲ್ಲಿಸಲು...

ಬೆಂಗಳೂರು ಕಾಲ್ತುಳಿತ ಪ್ರಕರಣ: ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆಗಳ ಸುರಿಮಳೆ : ತನಿಖೆಗೆ ಆದೇಶ, ವರದಿ ಸಲ್ಲಿಸಲು ಸೂಚನೆ

0

ಬೆಂಗಳೂರು: ಐಪಿಎಲ್ 2025 ಕಪ್ ಗೆದ್ದ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ದುರಂತದಲ್ಲಿ 11 ಮಂದಿ ಸಾವಿಗೀಡಾದ ಪ್ರಕರಣ ತೀವ್ರ ರೂಪ ಪಡೆದುಕೊಳ್ಳುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಿಸಿಕೊಂಡು, (ಜೂನ್ 5) ಇಂದು ಮಧ್ಯಾಹ್ನ ವಿಚಾರಣೆ ನಡೆಸಿತು.

ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಅವರು ಈ ವೇಳೆ ಸರ್ಕಾರದ ಪರ ಪ್ರತಿನಿಧಿಸಿದ ಎಡ್ವೊಕೇಟ್ ಜನರಲ್ (ಎಜಿ) ಶಶಿಕಿರಣ್ ಶೆಟ್ಟಿಗೆ ಸುದೀರ್ಘವಾಗಿ ಪ್ರಶ್ನೆಗಳನ್ನು ಕೇಳಿದರು. “ಇಂತಹ ಮಾಸ್ ಈವೆಂಟ್‌ಗಳಿಗೆ ಎಸ್‌ಒಪಿ ಬೇಕಲ್ಲವೆ? ವೈದ್ಯಕೀಯ ಸಿದ್ಧತೆ, ಆಂಬ್ಯುಲೆನ್ಸ್ ವ್ಯವಸ್ಥೆ, ಭದ್ರತೆ ಹಾಗೂ ಜನದಟ್ಟಣೆಯ ನಿರ್ವಹಣೆಗೆ ಇರಬೇಕಾದ ತಯಾರಿ ಏನು?” ಎಂಬಂತಹ ಪ್ರಶ್ನೆಗಳು ಕೇಳಲಾಯಿತು.

ಎಜಿ ಶಶಿಕಿರಣ್ ಶೆಟ್ಟಿ ಪ್ರತಿಕ್ರಿಯಿಸಿ, “ಸರ್ಕಾರ ಹೈಕೋರ್ಟ್ ನೀಡುವ ಸಲಹೆಗಳನ್ನು ಪಾಲಿಸಲು ಬದ್ಧವಾಗಿದೆ. ಆರ್‌ಸಿಬಿ ಗೆಲುವಿನ ಹಿನ್ನೆಲೆಯಲ್ಲಿ 1,643 ಪೊಲೀಸರನ್ನು ನಿಯೋಜಿಸಲಾಗಿತ್ತು. ಸುಮಾರು 2.5 ಲಕ್ಷ ಜನರು ಬೆಂಗಳೂರಿಗೆ ಆಗಮಿಸಿದ್ದರು. ಆದರೆ ಸ್ಟೇಡಿಯಂನ ಸಾಮರ್ಥ್ಯ ಕೇವಲ 34,600 ಜನರಷ್ಟು ಮಾತ್ರ. ಟಿಕೆಟ್‌ಗಳ ಪೂರೈಕೆ 33,000 ಅಷ್ಟೆ. ಭದ್ರತೆಗೆ ವಾಟರ್ ಟ್ಯಾಂಕರ್, ಕೆಎಸ್‌ಆರ್‌ಪಿ ತಂಡ, ಶಿಫಾರಸು ಮಾಡಲಾಗಿತ್ತು” ಎಂದು ಮಾಹಿತಿ ನೀಡಿದರು.

ಆದರೆ ಹಿರಿಯ ವಕೀಲರು, ಸಾಮಾಜಿಕ ಹೋರಾಟಗಾರರು ಹಾಗೂ ಕಾನೂನು ತಜ್ಞರು ಹಲವಾರು ಪ್ರಶ್ನೆಗಳನ್ನು ಹೈಕೋರ್ಟ್ ಮುಂದಿಟ್ಟರು. ವಕೀಲ ಅರುಣ್ ಶ್ಯಾಮ್, ರಂಗನಾಥರೆಡ್ಡಿ, ಹೇಮಂತ್ ರಾಜ್ ಮೊದಲಾದವರು, “ಅತಿದೊಡ್ಡ ಮಾದರಿಯ ಸಮಾರಂಭಕ್ಕೆ ಸರ್ಕಾರ ಅಗತ್ಯದ ಮುನ್ನೆಚ್ಚರಿಕೆ ತೆಗೆದುಕೊಂಡಿತ್ತಾ? ಕೇವಲ ಮೂರು ಗೇಟ್‌ಗಳನ್ನು ಮಾತ್ರ ತೆರೆಯಲಾಗಿದೆ ಎಂಬ ಆರೋಪ ಇದೆ. ಆರ್‌ಸಿಬಿ ಆಟಗಾರರು ದೇಶ ಅಥವಾ ರಾಜ್ಯಕ್ಕೆ ಆಡುತ್ತಿಲ್ಲ, ಇವರಿಗಾಗಿ ಸರ್ಕಾರ ಈ ಮಟ್ಟದ ಗೌರವಯುತ ಕಾರ್ಯಕ್ರಮ ನಡೆಸಬೇಕಿತ್ತಾ?” ಎಂದು ಪ್ರಶ್ನಿಸಿದರು.

ಹೈಕೋರ್ಟ್ ಪ್ರತಿಕ್ರಿಯೆ ನೀಡುತ್ತಾ, “ಈ ಬಗ್ಗೆ ಸರ್ಕಾರ ಸಂಪೂರ್ಣ ವರದಿ ಸಲ್ಲಿಸಬೇಕು. ಗಾಯಗೊಂಡವರ ಸಂಖ್ಯೆ, ಮರಣ ಪ್ರಮಾಣ, ಕಾರಣಗಳು, ಮುಂದಿನ ತಡೆ ಕ್ರಮಗಳ ಕುರಿತು ಸ್ಪಷ್ಟ ಮಾಹಿತಿ ಬೇಕು. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಬೇಕು,” ಎಂದು ತಿಳಿಸಿ, ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿತು.

ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಕೂಡ ಈ ಕುರಿತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ವಿರುದ್ಧ ದೂರು ನೀಡಿದ್ದಾರೆ.

ಈ ಮೂಲಕ, ಐಪಿಎಲ್ ಗೆಲುವಿನ ಸಂಭ್ರಮದಲ್ಲಿ ನಡೆದ ಈ ಭೀಕರ ದುರಂತ, ಕೇವಲ ಕ್ರಿಕೆಟ್ ಅಭಿಮಾನಿಗಳ ನೋವಿಗಲ್ಲ, ಇದೀಗ ರಾಜಕೀಯ ಹಾಗೂ ಕಾನೂನು ಹೋರಾಟಕ್ಕೂ ದಾರಿ ತೆರೆದಿದೆ. ಹೈಕೋರ್ಟ್ ಹೆಚ್ಚಿನ ಸ್ಪಷ್ಟನೆ, ಹೊಣೆಗಾರಿಕೆ ಮತ್ತು ವ್ಯವಸ್ಥಿತ ತನಿಖೆಯ ನಿರೀಕ್ಷೆಯಲ್ಲಿ ಮುಂದಿನ ಕ್ರಮ ಕೈಗೊಳ್ಳಲಿದೆ.