ಮನೆ ರಾಜ್ಯ ಸಚಿವ ಎಸ್.ಟಿ.ಸೋಮಶೇಖರ್ ಅವರಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

ಸಚಿವ ಎಸ್.ಟಿ.ಸೋಮಶೇಖರ್ ಅವರಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

0

ಮೈಸೂರು(Mysuru): ಪ್ರಶಸ್ತಿಗೆ ಶಿಫಾರಸ್ಸು ಮಾಡುವಂತೆ ಎಲ್ಲೆಡೆ ಒತ್ತಡ ಬರುತ್ತದೆ, ಆದರೆ ಮೈಸೂರಿನಲ್ಲಿ ಯಾವುದೇ ಶಿಕ್ಷಕ ಶಿಫಾರಸು ಕೇಳಿಕೊಂಡು ಬಂದಿಲ್ಲ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಯಾವೊಬ್ಬ ಶಿಕ್ಷಕ ಕೂಡ ತಮ್ಮ ಬಳಿ ಬಂದು ಪ್ರಶಸ್ತಿಗೆ ಶಿಫಾರಸು ಕೇಳಿಲ್ಲ. ಶಿಕ್ಷಕರ ಮೇಲೆ ದೂರುಗಳು ಸಹ ಬಂದಿಲ್ಲ. ಉತ್ತಮ ಫಲಿತಾಂಶ ತರುವ ಮೂಲಕ ಜಿಲ್ಲೆಗೆ ಕೀರ್ತಿ ತರುವ ಕೆಲಸ ಶಿಕ್ಷಕರಿಂದ ಆಗುತ್ತಿದೆ ಎಂದರು.

ಶಿಕ್ಷಕ, ತತ್ವಜ್ಞಾನಿ, ವಿದ್ವಾಂಸರಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವೂ ಆದ ಈ ದಿನ, ಶಿಕ್ಷಕರಿಗೆ ಗೌರವ ಸಮರ್ಪಿಸುವ ದಿನವಾಗಿದೆ. ಉಪರಾಷ್ಟ್ರಪತಿ, ರಾಷ್ಟ್ರಪತಿಯೂ ಆಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕರ ಬಗ್ಗೆ ಅಪಾರ ಗೌರವ ಹೊಂದಿದ್ದರು. ಹೀಗಾಗಿ ಅವರ ಜನ್ಮದಿನಾಚರಣೆಯನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಜಿಲ್ಲೆಯಲ್ಲಿ ಅತ್ಯುತ್ತಮ ಶಿಕ್ಷಕರಿದ್ದಾರೆ ಎಂದರು.

ಒಂದು ಉತ್ತಮ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಗ್ರಗಣ್ಯವಾದದ್ದು. ಮಕ್ಕಳಿಗೆ ಪಠ್ಯದಲ್ಲಿನ ವಿಚಾರಗಳನ್ನು ತಿಳಿಸಿಕೊಡುವುದರ ಜೊತೆಜೊತೆಗೆ ಜೀವನದ ಪಾಠವನ್ನು ಕಲಿಸುವುದು ಗುರು. ಕೋವಿಡ್ ಸಂಕಷ್ಟ ಸಮಯದಲ್ಲಿ ಶಿಕ್ಷಕರು ಅತ್ಯುತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಅವರ ಪರಿಶ್ರಮ ಶ್ಲಾಘನೀಯ ಎಂದು ಹೇಳಿದರು.

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿದ ಸಚಿವರು, ನಾನಾ ಬೇಡಿಕೆಗಳನ್ನು ಒಳಗೊಂಡ ಶಿಕ್ಷಕರು ನೀಡಿರುವ ಮನವಿ ಪತ್ರವನ್ನು ಶಿಕ್ಷಣ ಸಚಿವರಿಗೆ ತಲುಪಿಸಲಾಗುವುದು ಎಂದು ಹೇಳಿದರು.

ಸಮಾರಂಭದಲ್ಲಿ ಶಾಸಕರುಗಳಾದ ನಾಗೇಂದ್ರ, ರಾಮದಾಸ್, ತನ್ವೀರ್ ಸೇಠ್, ವಿಧಾನಪರಿಷತ್ ಸದಸ್ಯರಾದ ಮಂಜೇಗೌಡ, ಮರಿತಿಬ್ಬೇಗೌಡ, ಮೇಯರ್ ಸುನಂದಾ ಪಾಲನೇತ್ರಾ, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಸೇರಿದಂತೆ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದಿನ ಲೇಖನಹಾಸ್ಯ ಚಟಾಕಿ
ಮುಂದಿನ ಲೇಖನಹಿಜಾಬ್ ಪ್ರಕರಣ: ವಿದ್ಯಾರ್ಥಿಗಳು ಮಿನಿ, ಮಿಡಿ ಅಥವಾ ಬೇಕಾದದ್ದು ತೊಡಬಹುದೇ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್‌