ಮನೆ ರಾಜ್ಯ ನಿಜವಾದ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುವ ಬ್ರಿಟಿಷರ ಏಜೆಂಟರ ಬಗ್ಗೆ ಎಚ್ಚರವಿರಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ನಿಜವಾದ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುವ ಬ್ರಿಟಿಷರ ಏಜೆಂಟರ ಬಗ್ಗೆ ಎಚ್ಚರವಿರಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ

0

ಬೆಂಗಳೂರು, ಆ15: ಸ್ವಾತಂತ್ರ್ಯವೀರ ಸಂಗೊಳ್ಳಿರಾಯಣ್ಣನನ್ನು ಬ್ರಿಟಿಷರಿಗೆ ಹಿಡಿದುಕೊಟ್ಟವರು ನಮ್ಮವರೇ. ಈಗಲೂ ಬ್ರಿಟಿಷರ ಏಜೆಂಟರುಗಳು ಇದ್ದಾರೆ. ಅವರು ನಮ್ಮ ನಿಜವಾದ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುತ್ತಾರೆ. ಇಂಥವರ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರತಿಷ್ಠಾನ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಡೆದ ಕ್ರಾಂತಿವೀರ ಸಂಗೊಳ್ಳಿರಾಯಣ್ಣನವರ 226 ನೇ ಜಯಂತೋತ್ಸವದಲ್ಲಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಆಗಸ್ಟ್ 15 ದೇಶದ ಸ್ವಾತಂತ್ರ್ಯ ದಿನ. ಇದೇ ದಿನ ಸಂಗೊಳ್ಳಿರಾಯಣ್ಣ ಅವರ ಜನ್ಮ ದಿನವೂ ಹೌದು. ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿರಾಯಣ್ಣ ಅವರ ಆಶಯವೂ ಇದೇ ಆಗಿತ್ತು. ಆಗಸ್ಟ್ 15 ಕ್ಕೆ ರಾಯಣ್ಣರ ಹುಟ್ಟು ದಿನವಾದರೆ, ಜನವರಿ 26 ಬ್ರಿಟಿಷರು ರಾಯಣ್ಣರನ್ನು ಗಲ್ಲಿಗೇರಿಸಿದ ದಿನ. ಈ ಎರಡೂ ದಿನಗಳೂ ದೇಶದ ಚರಿತ್ರೆಯಲ್ಲಿ ಪ್ರಮುಖವಾದ ದಿನ ಎಂದರು.

ಸರ್ವರಿಗೂ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ, ಧಾರ್ಮಿಕ ಸ್ವಾತಂತ್ರ್ಯ ಸಿಕ್ಕರೆ ಮಾತ್ರ ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮರ ತ್ಯಾಗಕ್ಕೆ ಬೆಲೆ ಬರುತ್ತದೆ ಎಂದರು.

ರಾಯಣ್ಣರ ಹೆಸರಿನಲ್ಲಿ ಸೈನಿಕ ಶಾಲೆ, ಸಂಗೊಳ್ಳಿ ಹಾಗೂ ರಾಯಣ್ಣರನ್ನು ಗಲ್ಲಿಗೆ ಏರಿಸಿದ ಸ್ಥಳಗಳ ಅಭಿವೃದ್ಧಿಗಾಗಿ 280 ಕೋಟಿ ಅನುದಾನವನ್ನು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ನೀಡಿ ಚಾಲನೆ ನೀಡಿದ್ದೆ. ಸದ್ಯದಲ್ಲೇ ನಾನೇ ಸೈನಿಕ ಶಾಲೆಯನ್ನು ಉದ್ಘಾಟಿಸುತ್ತೇನೆ ಎಂದರು.

ಪ್ರಜಾಪ್ರಭುತ್ವ ದೇಶ ನಿರ್ಮಿಸಬೇಕು ಎನ್ನುವುದು ಗೆರಿಲ್ಲಾ ಹೋರಾಟಗಾರ ಸಂಗೊಳ್ಳಿರಾಯಣ್ಣರ ಆಶಯವಾಗಿತ್ತು. ಪ್ರಜಾಪ್ರಭುತ್ವ ಗಟ್ಟಿಗೊಳಿಸಿಕೊಳ್ಳುವುದು ಎಂದರೆ ನಮ್ಮ ಸಂವಿಧಾನವನ್ನು ಕಾಪಾಡಿಕೊಳ್ಳುವುದೇ ಆಗಿದೆ. ಈಗ ನಮ್ಮ ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವ ದುಷ್ಟ ಶಕ್ತಿಗಳನ್ನು ಬೆಳೆಯಲು ಬಿಡಬಾರದು ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಿಡುಮಾಮಡಿ ಮಠದ ವೀರಭದ್ರ ಚನ್ನಮಲ್ಲ ಮಹಾ ಸ್ವಾಮೀಜಿಗಳು, ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ಗೋವಿಂದರಾಜ್, ಮಾಜಿ ಸಚಿವ ಎಚ್.ಎಂ.ರೇವಣ್ಣ, ಮಾಜಿ ಮಹಾ ಪೌರರಾದ ರಾಮಚಂದ್ರಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಹಿಂದಿನ ಲೇಖನನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದ 77 ನೇ ಸ್ವಾತಂತ್ರ್ಯ ದಿನಾಚರಣೆ
ಮುಂದಿನ ಲೇಖನಬೆಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನ