ಮೈಸೂರು(Mysuru): ಕಾಂಗ್ರೆಸ್ ವತಿಯಿಂದ ಆಯೋಜಿಸುತ್ತಿರುವ ಭಾರತ್ ಜೋಡೋ ಕಾರ್ಯಕ್ರಮದ ಪೂರ್ವಭಾವಿ ಸಭೆ ಜು.19 ರಂದು ಮೈಸೂರಿನಲ್ಲಿ ನಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಪಕ್ಷದ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯುದ್ದಕ್ಕೂ ಭಾಗವಹಿಸಲಿದ್ದಾರೆ. ಯಾತ್ರೆಯು ಕರ್ನಾಟಕದಲ್ಲಿ 350 ಕಿ.ಮೀ. ಸಂಚರಿಸಲಿದೆ. ಅದರ ರೂಪುರೇಷೆಗಳು ಈಗ ಸಿದ್ಧವಾಗುತ್ತಿವೆ. ಯಾತ್ರೆಯು ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸಲಿದೆ. ಜುಲೈ 19ರಂದು ಮೈಸೂರಿನಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಸಿದ್ದರಾಮಯ್ಯ ಹುಟ್ಟುಹಬ್ಬ ಮಾತ್ರವಲ್ಲ, ಕಾಂಗ್ರೆಸ್ ಸರ್ಕಾರದ ಪ್ರಗತಿಯ ಮೆಲುಕು: ದಾವಣಗೆರೆಯಲ್ಲಿ ನಡೆಯಲಿರುವುದು ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹುಟ್ಟುಹಬ್ಬ ಆಚರಣೆಯಷ್ಟೆ ಅಲ್ಲ. ಅದರ ಮೂಲಕ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದ ಸಂದರ್ಭದಲ್ಲಿ ರಾಜ್ಯದಲ್ಲಾಗಿರುವ ಪ್ರಗತಿಯ ಬಗ್ಗೆ ಮೆಲುಕು ಹಾಕಲಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ನಮ್ಮ ಆಡಳಿತ ಅವಧಿಯಲ್ಲಿ ಏನಾಗಿತ್ತು? ಈಗ ಪರಿಸ್ಥಿತಿ ಏನಾಗಿದೆ ಎಂಬುದನ್ನು ಜನರಿಗೆ ವಿವರಿಸುತ್ತೇವೆ. ಬಿಜೆಪಿ ಸರ್ಕಾರದ ದುರಾಡಳಿತದ ಮೇಲೆ ಬೆಳಕು ಚೆಲ್ಲಲಿದ್ದೇವೆ. ಬಿಜೆಪಿಯವರು ಸಿದ್ದರಾಮೋತ್ಸವ, ಅದು–ಇದು ಎಂದೆಲ್ಲಾ ವಿನಾಕಾರಣ ಮಾತನಾಡುತ್ತಿದ್ದಾರಷ್ಟೆ ಎಂದು ಪ್ರತಿಕ್ರಿಯಿಸಿದರು.
ಕರ್ನಾಟಕದಲ್ಲಿ ಶಾಂತಿ ಬೇಕಾದರೆ ಸಿಎಂನ್ನು ಕೇಳಿ: ಬಾಗಲಕೋಟೆಯ ಕುಳಗೇರಿ ಕ್ರಾಸ್ ದಾಬಾ ಬಳಿ ನಡೆದ ಹಲ್ಲೆಯಲ್ಲಿ ಗಾಯಗೊಂಡಿದ್ದ ಸಂತ್ರಸ್ತರಿಗೆ ನೀಡಿದ್ದ ₹2 ಲಕ್ಷವನ್ನು ಅವರ ಕುಟುಂಬದ ಸದಸ್ಯರು ಸಿದ್ದರಾಮಯ್ಯ ತೆರಳುತ್ತಿದ್ದ ವಾಹನದ ಮೇಲೆ ಎಸೆದ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಯಾರು ಶಾಂತಿ ಕದಡುತ್ತಿದ್ದಾರೆಯೋ ಅವರು ಇದನ್ನು ಗಮನಿಸಲಿ. ಕರ್ನಾಟಕದಲ್ಲಿ ಶಾಂತಿ ಬೇಕಾದರೆ, ಆ ವಿಚಾರದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸಿ ಎಂದರು.
ಕುವೆಂಪು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟ ನಮ್ಮದು. ಯಾರೂ ಇಂತಹ ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿರುವುದಿಲ್ಲ. ಎಲ್ಲವೂ ಭಗವಂತನ ಪ್ರೇರಣೆ. ಈಗ ಮುಸ್ಲಿಂ ಮಹಿಳೆಯರು ಶಾಂತಿ ಕೇಳುವುದರಲ್ಲಿ ತಪ್ಪಿಲ್ಲ ಎಂದು ಹೇಳಿದರು.