ಮನೆ ರಾಜಕೀಯ ಭಾರತ ಜೋಡೋ ಯಾತ್ರೆ ವಿಭಜಕ ಮನಸುಗಳ ವಿಜೃಂಭಣೆಯ ನಡಿಗೆ : ಡಾ.ಕೆ.ಸುಧಾಕರ್

ಭಾರತ ಜೋಡೋ ಯಾತ್ರೆ ವಿಭಜಕ ಮನಸುಗಳ ವಿಜೃಂಭಣೆಯ ನಡಿಗೆ : ಡಾ.ಕೆ.ಸುಧಾಕರ್

0

ಬೆಂಗಳೂರು(Bengaluru): ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಸದುದ್ದೇಶವನ್ನು ಅರ್ಥ ಮಾಡಿಕೊಳ್ಳುವ ಅಗತ್ಯವೇ ಇಲ್ಲ. ಇದೊಂದು ಶುದ್ಧ ರಾಜಕೀಯ ಅಜೆಂಡಾದ ವಿಭಜಕ ಮನಸುಗಳ ವಿಜೃಂಭಣೆಯ ನಡಿಗೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಲೇವಡಿ ಮಾಡಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಸೂತ್ರ ಹರಿದ ಗಾಳಿಪಠದಂತ ಒಂದು ವ್ಯರ್ಥ ಹಾರಾಟ ಎಂದಿದ್ದಾರೆ.

ಗೊತ್ತು- ಗುರಿ ಎರಡೂ ಇಲ್ಲದ ಈ ನಡಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ವನ್ನು ನಿಂದಿಸುವ ಏಕಮಾತ್ರ ಉದ್ದೇಶ ಹೊಂದಿರುವುದು ವಿಪರ್ಯಾಸ. ಕಾಂಗ್ರೆಸ್ ಈ ದೇಶವನ್ನು ಅರ್ಧ ಶತಮಾನಗಳ ಕಾಲ ಆಳಿದೆ ಎಂದಿದ್ದಾರೆ.

ಈ ಅವಧಿಯಲ್ಲಿ ರಾಹುಲ್ ಗಾಂಧಿಯವರ ಪೂರ್ವಜರು ಎಲ್ಲೆಲ್ಲಿ ದೇಶವನ್ನು ಒಡೆದರೋ ಅದೆಲ್ಲವನ್ನೂ ಜತನದಿಂದ ಕಟ್ಟುವ ಕಾರ್ಯವನ್ನು ಆರ್’ಎಸ್ ಮಾಡಿದೆ. ಈಗ ರಾಹುಲ್ ಗಾಂಧಿ ಕೂಡಿಸಿದ್ದನ್ನು ಕಳೆಯಲು ಹೊರಟಿದ್ದಾರೆ ಎಂಬುದೇ ಹೆಚ್ಚು ಸಮರ್ಪಕ ವ್ಯಾಖ್ಯಾನವಾದೀತು ಎಂದು ಅಭಿಪ್ರಾಯಪಟ್ಟಿದ್ದಾರೆ.

ದೇಶ ವಿಭಜನೆ,ಕಾಶ್ಮೀರ ವಿಭಜನೆ, ತುರ್ತುಪರಿಸ್ಥಿತಿ ಹೇರಿಕೆ, ಬೋಫೋರ್ಸ್ ಹಗರಣ, 2 ಜಿ ಸ್ಕ್ಯಾಮ್ ಇದೆಲ್ಲವೂ ಕಾಂಗ್ರೆಸ್ ನಡೆಸಿದ ವಿಭಜಕ ಆಡಳಿತದ ಫಲಶೃತಿ. ಇದಲ್ಲದರ ಸಾಕ್ಷಿ ಪ್ರಜ್ಞೆಯೇ ರಾಹುಲ್ ಗಾಂಧಿ ಎಂದು ಹೇಳಿದ್ದಾರೆ.

ಇನ್ನೇನು ಉಳಿಸಿದ್ದೀರಿ ಜೋಡಿಸುವುದಕ್ಕೆ? ನಿಮ್ಮ ಯಾತ್ರೆಯ ಕಾಲದಲ್ಲಿ ಒಮ್ಮೆಯಾದರೂ ಆತ್ಮವಿಮರ್ಶೆ ಮಾಡಿಕೊಂಡು ಈ ಪ್ರಶ್ನೆಗಳಿಗೆ ಉತ್ತರಿಸಿ ಎಂದಿರುವ ಅವರು, ಕಾಶ್ಮೀರದಲ್ಲಿ ಹಿಂದುಗಳ ಮಾರಣ ಹೋಮ ನಡೆದಾಗ ಭಾರತ್ ಜೋಡೋ ನೆನಪಾಗಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆ, ಮುಂಬಯಿ ಮೇಲೆ ಉಗ್ರರ ದಾಳಿ,ಬೋಧ ಗಯಾದಲ್ಲಿ ಭಯೋತ್ಪಾದಕ ದಾಳಿ ನಡೆದಾಗ ಸಹಭಾಳ್ವೆಯ ನೆನಪಾಗಲಿಲ್ಲ, ಕರ್ನಾಟಕದಲ್ಲಿ ಹಿಂದು ಕಾರ್ಯಕರ್ತರ ಸರಣಿ ನಡೆದಾಗ ಶಾಂತಿ ಮಂತ್ರದ ಸ್ಮರಣೆ ಬರಲಿಲ್ಲ. ಈಗ ಮರಳಿ ಅಧಿಕಾರ ಗಳಿಸುವುದಕ್ಕಾಗಿ ಇಷ್ಟೊಂದು ನಾಟಕವೇ? ಎಂದು ಪ್ರಶ್ನೆ ಮಾಡಿದ್ದಾರೆ.