ಭಾರತೀನಗರ: ಸಮೀಪದ ಕಾಡನಪುರದೊಡ್ಡಿ (ಕೆ.ಪಿ.ದೊಡ್ಡಿ) ಗ್ರಾಮದಲ್ಲಿ ನೂರಾರು ರೈತರು ಕಪ್ಪೆಗಳಿಗೆ ಮದುವೆ ಮಾಡಿಸಿ, ವರುಣರಾಯ ಕೃಪೆ ತೋರಿ ಮಳೆ ಸುರಿಸುವಂತೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ತೀವ್ರ ಬರಗಾಲ, ಬಿಸಿಲಿನ ಬೇಗೆಯಿಂದ ತತ್ತರಿಸಿರುವ ಗ್ರಾಮಸ್ಥರು ವರುಣರಾಯನ ಪ್ರಾರ್ಥನೆಗೆ ಈ ಪ್ರಯೋಗ ನಡೆಸಿದ್ದಾರೆ. ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಯುಗಾದಿಗೆ ಹಿಂದೇಳು, ಮುಂದೇಳು ದಿನ ಮಳೆ ಬರುತ್ತದೆ ಎಂಬುದು ನಂಬಿಕೆ. ಈ ಬಾರಿ ಯುಗಾದಿ ತಡವಾಗಿ ಬಂದಿದ್ದರೂ ಮಳೆ ಬರದ ಕಾರಣ ಗ್ರಾಮಸ್ಥರು ಕಪ್ಪೆಗಳ ಮದುವೆಯೊಂದಿಗೆ ದೇವರ ಮೊರೆ ಹೋಗಿದ್ದಾರೆ.
ಎರಡು ಕಪ್ಪೆಗಳಿಗೆ ಹೂವು ಮುಡಿಸಿ, ಜೊತೆಯಾಗಿ ಇರಿಸಿ ಅರಸಿನದ ಕೊಂಬು ಕಟ್ಟಿಸುವ ಮೂಲಕ ಗದ್ದೆ ಬಯಲಿನಲ್ಲಿ ಮದುವೆ ಮಾಡಿಸಿದರು.
ವರುಣ ದೇವನಿಗೆ ಪೂಜೆ ಸಲ್ಲಿಸಿ ಮಳೆಸುರಿಸಿ ಬೆಳೆ, ಜನ-ಜಾನುವಾರು, ಪ್ರಾಣಿ, ಪಕ್ಷಿ ಸಂಕುಲಗಳನ್ನು ಉಳಿಸುವಂತೆ ಗ್ರಾಮದ ಜನರು ಪ್ರಾರ್ಥಿಸಿದರು. ಕಪ್ಪೆಗಳ ಮದುವೆ, ಪೂಜೆ ಪ್ರಯುಕ್ತ 500 ಕ್ಕೂ ಹೆಚ್ಚು ಜನರಿಗೆ ಅನ್ನಸಂತರ್ಪಣೆ ನಡೆಸಿದರು.
ರೈತರ ಕಷ್ಟವನ್ನು ರಾಜ್ಯ, ಕೇಂದ್ರ ಸರ್ಕಾರಗಳು ಕೇಳುತ್ತಿಲ್ಲ. ರಾಜ್ಯಕೀಯ ವ್ಯಕ್ತಿಗಳಿಗೆ ಅವರದೇ ಆದ ಕಾರ್ಯದೊತ್ತಡದಿಂದ ಜನರ ಸಮಸ್ಯೆ ಆಲಿಸಲು, ಬರಗಾಲ ನಿರ್ವಹಣೆ ಮಾಡಲು ಆಗುತ್ತಿಲ್ಲ. ರೈತರ ಬಗ್ಗೆ ನಿರ್ಲಕ್ಷ್ಯಧೋರಣೆ ತಳೆದಿದ್ದು, ಕೊನೆಗೆ ದೇವರ ಕೃಪೆಯಾದರೂ ದೊರಕುವುದೇನೋ ಎಂಬ ಆಸೆಯಿಂದ ಮಳೆಗಾಗಿ ದೇವರ ಮೋರೆಹೋಗಬೇಕಾದ ದಯನೀಯ ಸ್ಥಿತಿ ನಮ್ಮದಾಗಿದೆ. ಬರದ ಸಮಯದಲ್ಲಿ ಹಿರಿಯರು ಮಾಡುತ್ತಿದ್ದಂತೆ ಸಂಪ್ರದಾಯಬದ್ಧವಾಗಿ ಕಪ್ಪೆಗಳಿಗೆ ಮದುವೆ ಮಾಡಿಸಿ, ಮಳೆರಾಯನನ್ನು ಪ್ರಾರ್ಥಸಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದರು.
ಕಾಡನಪುರದದೊಡ್ಡಿ, ಮಣಿಗೆರೆಯ 500ಕ್ಕೂ ಹೆಚ್ಚು ಗ್ರಾಮಸ್ಥರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದ್ದರು.