ಈ ಹಿಂದೆ “ಮದಿಪು’, “ವರ್ಣಪಟಲ’ ಸಿನಿಮಾಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಚೇತನ್ ಮುಂಡಾಡಿ ಈ ಬಾರಿ “ಭಾವಪೂರ್ಣ’ ಎಂಬ ಮತ್ತೂಂದು ವಿಶೇಷ ಕಥನವನ್ನು ಪ್ರೇಕ್ಷಕರ ಮುಂದೆ ತರುವ ತಯಾರಿಯಲ್ಲಿದ್ದಾರೆ. ಈಗಾಗಲೇ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿ ತೆರೆಗೆ ಬರಲು ಸಿದ್ಧವಾಗುತ್ತಿರುವ “ಭಾವಪೂರ್ಣ’ ಸಿನಿಮಾದ ಟ್ರೇಲರ್ ಮತ್ತು ಹಾಡುಗಳು ಇತ್ತೀಚೆಗೆ ಬಿಡುಗಡೆಯಾಯಿತು.
ಇದೇ ವೇಳೆ ಮಾತನಾಡಿದ ನಿರ್ದೇಶಕ ಚೇತನ್ ಮುಂಡಾಡಿ, “ಪೋಟೋಗಳಲ್ಲಿ ಕಾಲಘಟ್ಟವನ್ನು ಬೆಸೆಯುವ ಕಥೆ ಈ ಸಿನಿಮಾದಲ್ಲಿದೆ. ಕೊರೊನಾ ಸಮಯದಲ್ಲಿ ಹೊಳೆದ ಕಥೆಯೊಂದನ್ನು ದೃಶ್ಯರೂಪದಲ್ಲಿ ತೆರೆಗೆ ತರುವ ಪ್ರಯತ್ನ ಮಾಡಲಾಗಿದೆ. ಒಬ್ಬ ಮಧ್ಯ ವಯಸ್ಸು ಮೀರಿದ ಮುಗ್ಧನ ಭಾವ-ತೀರ ಯಾನ, ಮತ್ತೂಬ್ಬ ಯುವಕನ ಹುಮ್ಮಸ್ಸಿನ ಪ್ರೀತಿಯ ಪಯಣದಲ್ಲಿ ಸಿನಿಮಾದ ಕಥೆ ಸಾಗುತ್ತದೆ’ ಎಂದು ಕಥಾಹಂದರದ ಬಗ್ಗೆ ವಿವರಣೆ ನೀಡಿದರು.
“ಭಾವಪೂರ್ಣ’ ಸಿನಿಮಾದಲ್ಲಿ ಹಿರಿಯ ನಟ ರಮೇಶ್ ಪಂಡಿತ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಅಥರ್ವ ಪ್ರಕಾಶ್, ಮಂಜುನಾಥ ಹೆಗ್ಡೆ, ಶೈಲಶ್ರೀ ಧರ್ಮೇಂದ್ರ ಅರಸ್, ವಿನ್ಯಾ ಚೇತನ್ ರೈ, ಮಂಗಳಾ, ಎಂ. ಕೆ ಮಠ, ನಾಗೇಂದ್ರ ಶಾ, ಶಿವಾಜಿ ರಾವ್ ಜಾಧವ್, ಪವನ ಮೊದಲಾದವರು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಈ ಸಿನಿಮಾದಲ್ಲಿ ನೀವೇ ಹೀರೋ. ನಿಮ್ಮ ಪಾತ್ರದ ಮೇಲೆ ಇಡೀ ಸಿನಿಮಾದ ಕಥೆ ಸಾಗುತ್ತದೆ. ಇದೊಂದು ಮುಖ್ಯ ಪಾತ್ರ ಎಂದಾಗ ಸ್ವಲ್ಪ ಆತಂಕವಾಗಿತ್ತು. ಆದರೆ ನಿರ್ದೇಶಕರು ಹೇಳಿದ ಕಥೆ ಮನಮುಟ್ಟುವಂತಿದ್ದರಿಂದ, ಈ ಸಿನಿಮಾ ಒಪ್ಪಿಕೊಂಡೆ. ಇಡೀ ಸಿನಿಮಾದ ಶೂಟಿಂಗ್ ಮಾಡಿದ್ದು, ಒಂದು ಪಿಕ್ನಿಕ್ ಮಾಡಿದ ಅನುಭವದಂತಿತ್ತು. ಸಿನಿಮಾ ತುಂಬ ಚೆನ್ನಾಗಿ ಬಂದಿದ್ದು, ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂಬುದು ನಟ ರಮೇಶ್ ಪಂಡಿತ್ ಮಾತು.
“ಜಿ.ಎಲ್ ಮೋಶನ್ ಪಿಕ್ಚರ್’ ಬ್ಯಾನರಿನಲ್ಲಿ ಪ್ರಶಾಂತ್ ಅಂಜನಪ್ಪ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ “ಭಾವಪೂರ್ಣ’ ಸಿನಿಮಾಕ್ಕೆ ಚೇತನ್ ಮುಂಡಾಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ವಿ.ಮನೋ ಹರ್ ಸಂಗೀತ ಸಂಯೋಜಿಸಿದ್ದು, ಅಕ್ಷಯ್ ಎಸ್. ರಿಷಭ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಪ್ರಸನ್ನ ಗೊರಲಕೆರೆ ಛಾಯಾಗ್ರಹಣ, ಕೀರ್ತಿರಾಜ್ ಡಿ. ಸಂಕಲನವಿದೆ. ಅಂಕೋಲ, ತಾಳಗುಪ್ಪ, ಸೌತಡ್ಕ ಸುತ್ತಮುತ್ತ ಸುಮಾರು 45 ದಿನಗಳ ಕಾಲ “ಭಾವಪೂರ್ಣ’ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ.