ಮನೆ ರಾಜಕೀಯ ಡಿಜಿಪಿ ರಾಜೀನಾಮೆಯನ್ನು ಸರ್ಕಾರ ಅಂಗೀಕರಿಸಬಾರದು: ಹೆಚ್.ಡಿ,ಕುಮಾರಸ್ವಾಮಿ

ಡಿಜಿಪಿ ರಾಜೀನಾಮೆಯನ್ನು ಸರ್ಕಾರ ಅಂಗೀಕರಿಸಬಾರದು: ಹೆಚ್.ಡಿ,ಕುಮಾರಸ್ವಾಮಿ

0

ಬೆಂಗಳೂರು(Bengaluru): ಕರ್ತವ್ಯಕ್ಕೆ ಅಡ್ಡಿಪಡಿಸಿ ನಿಯಮಬಾಹಿರ ವರ್ಗಾವಣೆ ಮಾಡಿದ್ದರಿಂದ ಬೇಸತ್ತು ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ವಿಭಾಗದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಡಾ.ಪಿ.ರವೀಂದ್ರನಾಥ್ ಅವರ ರಾಜೀನಾಮೆಯನ್ನು ರಾಜ್ಯ ಸರಕಾರ ಅಂಗೀಕಾರ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ಸಂಬಂಧ ಇಂದು ಟ್ವೀಟ್ ಮಾಡಿರುವ ಅವರು, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ದಲಿತ, ದಕ್ಷ ಅಧಿಕಾರಿ ರವೀಂದ್ರನಾಥ್ ಅವರು ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಸರಕಾರಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ತಿಮಿಂಗಿಲಗಳಿಗೆ ಬಲೆ ಹಾಕಿದ್ದರು. ಹೀಗೆ, ಸರಕಾರ ಮತ್ತು  ಸಮಾಜಕ್ಕೆ ವಂಚನೆ ಮಾಡಿದ್ದವರ ಜಾತಕ ಬಿಚ್ಚಿಡಲು ಅವರು ಪ್ರಯತ್ನ ಮಾಡುತ್ತಿದ್ದರು ಎಂದು ಟ್ವೀಟಿಸಿದ್ದಾರೆ.

ಗಣ್ಯ ವ್ಯಕ್ತಿ, ಪೊಲೀಸ್ ಇಲಾಖೆಯಲ್ಲಿ ಪ್ರಾಮಾಣಿಕತೆಯ ಪೋಸು ಕೊಟ್ಟು ನಕಲಿ ಜಾತಿ ಪ್ರಮಾಣ ಪತ್ರದ ಮೂಲಕ ಹುದ್ದೆ ಗಿಟ್ಟಿಸಿರುವ ಆರೋಪ ಎದುರಿಸುತ್ತಿರುವ ನಿವೃತ್ತ ಅಧಿಕಾರಿಗೆ ನೋಟೀಸ್ ನೀಡಿದ ಹತ್ತೇ ದಿನದಲ್ಲಿ ಆ ನೋಟೀಸ್ ಕೊಟ್ಟ ಹಿರಿಯ ಅಧಿಕಾರಿಯನ್ನೇ ಎತ್ತಂಗಡಿ ಮಾಡಲಾಗಿದೆ. ಈ ಸರಕಾರ ಯಾರ ಬಾಲಂಗೋಚಿ ಎನ್ನುವುದು ಈ ವರ್ಗಾವಣೆ ಒಂದರಿಂದಲೇ ಅರ್ಥವಾಗುತ್ತದೆ. ಏಕೆಂದರೆ, ಆರೋಪಿತ ನಿವೃತ್ತ ಅಧಿಕಾರಿ ಕಾಂಗ್ರೆಸ್ ಸರಕಾರದಲ್ಲಿ ಗೃಹ ಇಲಾಖೆ ಸಲಹೆಗಾರರಾಗಿದ್ದರು. 5 ವರ್ಷ ರಾಜ್ಯವನ್ನಾಳಿದ ಮುಖ್ಯಮಂತ್ರಿಗೆ ಆಪ್ತರೂ ಆಗಿದ್ದರು. ಅವರಿಗೆ ನೋಟೀಸ್ ನೀಡಿದಾಕ್ಷಣ ಡಾ.ರವೀಂದ್ರನಾಥ್ʼರನ್ನು ವರ್ಗಾವಣೆ ಮಾಡಲಾಗಿದೆ. ಹಾಗಾದರೆ, ಬಿಜೆಪಿ & ಕಾಂಗ್ರೆಸ್ ನಡುವೆ ಇರುವ ಒಳ ಒಪ್ಪಂದವೇನು? ಒಬ್ಬ ದಲಿತ ಅಧಿಕಾರಿಯನ್ನು ಬಲಿ ಹಾಕಲು ಎರಡೂ ರಾಷ್ಟ್ರೀಯ ಪಕ್ಷಗಳು ನಡೆಸಿದ ಷಡ್ಯಂತ್ರ ಎಂದು ನೇರವಾಗಿ ಆರೋಪಿಸಿದ್ದಾರೆ.

ಆಪರೇಷನ್ ಕಮಲದ ಮೂಲಕ ಬಿಜೆಪಿ ಅಧಿಕಾರಕ್ಕೆ ಬರಲು ಸಹಕಾರ ನೀಡಿದ ನಾಯಕರ ಆಪ್ತರಾಗಿದ್ದ ನಿವೃತ್ತ ಅಧಿಕಾರಿ ವಿರುದ್ಧ ಕೇಳಿಬಂದಿರುವುದು ಅತಿ ಗಂಭೀರ ಆರೋಪ. ಅಂಥ ವ್ಯಕ್ತಿಯನ್ನು ರಕ್ಷಣೆ ಮಾಡುವ ಅಗತ್ಯ ಬಿಜೆಪಿ ಸರಕಾರಕ್ಕೆ ಏನಿದೆ?  ಎಲ್ಲಿಂದ, ಯಾರು, ಯಾರ ಮೇಲೆ ಒತ್ತಡ ಹೇರಿದ್ದಾರೆ? ಯಾರು, ಯಾರ ಋಣ ಚುಕ್ತಾ ಮಾಡುತ್ತಿದ್ದಾರೆ ಎನ್ನುವುದು ಜನರಿಗೆ ಗೊತ್ತಾಗಬೇಕಿದೆ. ಡಾ.ರವೀಂದ್ರನಾಥ್ ಅವರ ವಿಷಯದಲ್ಲಿ ರಾಜ್ಯ ಸರಕಾರ ನಡೆದುಕೊಳ್ಳುತ್ತಿರುವ ರೀತಿ ಪ್ರಾಮಾಣಿಕ ಅಧಿಕಾರಿಗಳಿಗೆ ದೊಡ್ಡ ಬೆದರಿಕೆ ಎಂದು ಹೇಳಿದ್ದಾರೆ.

ಹಿಂದಿನ ಲೇಖನಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ಕರ್ನಾಟಕದಲ್ಲೇ ಹೆಚ್ಚು: ಎನ್‌ಎಫ್‌ಎಚ್‌ಎಸ್‌ ಸಮೀಕ್ಷೆಯಿಂದ ಬಹಿರಂಗ
ಮುಂದಿನ ಲೇಖನಹೆತ್ತವರಿಂದ ಮಗು ದತ್ತು ಪಡೆಯುವುದು ಅಪರಾಧವಲ್ಲ: ಹೈಕೋರ್ಟ್ ಧಾರವಾಡ ಪೀಠ ತೀರ್ಪು