ಮನೆ ರಾಜ್ಯ ಭೈರಪ್ಪನವರ ಬದುಕು ಕೊನೆಯಿಲ್ಲದ ʻಯಾನʼ – ನಟ ಅನಂತನಾಗ್‌ ಭಾವುಕ..!

ಭೈರಪ್ಪನವರ ಬದುಕು ಕೊನೆಯಿಲ್ಲದ ʻಯಾನʼ – ನಟ ಅನಂತನಾಗ್‌ ಭಾವುಕ..!

0

ʻಭೈರಪ್ಪನವರ ಬದುಕು ಕೊನೆಯಿಲ್ಲದ ʻಯಾನʼ, ಹಿಮಾಲಯದಷ್ಟೇ ಎತ್ತರದ ವ್ಯಕ್ತಿತ್ವ ಅವರದ್ದು, ತಮ್ಮ ಕಾದಂಬರಿಯ ಮೂಲಕವೇ ವಿಜ್ಞಾನಿಗಳು ಯೋಚಿಸಲೂ ಸಾಧ್ಯವಾಗದ ಪಾತ್ರಗಳನ್ನು ಸೃಷ್ಟಿಸಿದವರು. ಈ ನವರಾತ್ರಿಯ ಸಂದರ್ಭದಲ್ಲಿ ಅವರನ್ನು ಕಳೆದುಕೊಂಡಿದ್ದು ಬಹಳ ದುಃಖ ತಂದಿದೆ…ʼʼ ಚಿರನಿದ್ರೆಗೆ ಜಾರಿದ್ದ ಭೈರಪ್ಪನವರಿಗೆ ಹಿರಿಯ ನಟ ಅನಂತ್ ನಾಗ್ ಅರ್ಪಿಸಿದ ಭಾವಪೂರ್ಣ ನುಡಿಗಳಿವು.

ಕನ್ನಡದ ಹಿರಿಯ ಸಾಹಿತಿ ಹಾಗೂ ಕನ್ನಡದ ಸಾಕ್ಷಿಪ್ರಜ್ಞೆ ಎಸ್.ಎಲ್ ಭೈರಪ್ಪ (91) ಅವರಿಂದು ಇಹಲೋಕ ತ್ಯಜಿಸಿದ್ದಾರೆ. ತಮ್ಮ ಕಾದಂಬರಿಗಳಿಂದಲೇ ಹಲವಾರು ಪೀಳಿಗೆಗೆ ಚಿಂತನೆ ಹಚ್ಚಿದ ʻಅಕ್ಷರ ಮಾಂತ್ರಿಕʼ ಬದುಕಿನ ಯಾನ ಮುಗಿಸಿ ಹೊರಟಿದ್ದಾರೆ. ಈ ಕುರಿತು ನಟ ಅನಂತ್‌ ನಾಗ್‌ ಅವರು ಮಾತನಾಡಿದ್ದಾರೆ.

ಈ ನವರಾತ್ರಿಯ ಸಂದರ್ಭದಲ್ಲಿ ಅವರು ಹೋಗಬಾರದಿತ್ತು. ಪರ್ವತಪ್ರಾಯ, ಹಿಮಾಲಯದಷ್ಟು ಎತ್ತರದ ವ್ಯಕ್ತಿಯನ್ನ ಕಳೆದುಕೊಂಡದ್ದು ದುಃಖ ತಂದಿದೆ. ನಾವೆಲ್ಲರೂ ಭೈರಪ್ಪನವರ ಕಾದಂಬರಿ ಓದಿ ಮೆಚ್ಚಿದವರು. ಅವರ ʻನಾಯಿ ನೆರಳುʼ ಕಾದಂಬರಿ ಸಿನಿಮಾ ಆಗಿ ಪರಿವರ್ತನೆ ಆಯಿತು. ನನಗೆ ಮುಖ್ಯಪಾತ್ರದಲ್ಲಿ ಅವಕಾಶ ಮಾಡಿಕೊಟ್ಟರು ಅಲ್ಲಿಂದಲೇ ನನ್ನ ನಟನೆ ಆರಂಭವಾಯಿತು ಎಂದು ತಿಳಿಸಿದರು.

ಭೈರಪ್ಪನವರ ಯಾವುದೇ ಕಾದಂಬರಿಯನ್ನು ಬಿಟ್ಟಿಲ್ಲ, ಏಕೆಂದ್ರೆ ಅವರ ಬರಹ ನನಗೆ ಪ್ರಿಯವಾದದ್ದು, ಯಾವಾಗಲೂ ರೆಫರೆನ್ಸ್‌ಗೆ ಅಂತ ಜೊತೆಯಲ್ಲೇ ಇಟ್ಟುಕೊಳ್ತಿದೆ. ಅದ್ರಲ್ಲೂ ʻಯಾನʼ ನನ್ನ ನೆಚ್ಚಿನ ಕಾದಂಬರಿ. ಇಡೀ ವಿಶ್ವದಲ್ಲೇ ಆ ರೀತಿಯ ಸ್ಪೇಸ್‌ (ಬಾಹ್ಯಾಕಾಶ) ಸೃಷ್ಟಿಸಿ ಯಾರೂ ಬರೆದಿಲ್ಲ. ವಿಜ್ಞಾನಿಗಳಿಗೂ ಯೋಚನೆ ಮಾಡಲು ಸಾಧ್ಯವಾಗದಂತಹ ಸ್ಪೇಸ್‌ ಅದು. ನಮ್ಮ ಹಿಂದೂ ತತ್ವಶಾಸ್ತ್ರವನ್ನ ಯಾರು ಅಭ್ಯಾಸ ಮಾಡಿದ್ದಾರೋ ಅವರು ಮಾತ್ರ ಅರ್ಥ ಮಾಡಿಕೊಳ್ಳೋದಕ್ಕೆ ಸಾಧ್ಯವಾಗಿದೆ.

ಒಂದು ಕಾದಂಬರಿಯಲ್ಲಿ ಮಹಿಳೆ, ಪುರುಷನ ಪಾತ್ರ ಸೃಷ್ಟಿಸಿದ ರೀತಿ.. ಅದನ್ನ ಓದಿದ್ರೆ ರಾತ್ರಿ ನಿದ್ರೆ ಬರಲ್ಲ. ಆಕಾಶ ಹೇಗೆ ಕೊನೆಯಿಲ್ಲದೇ ಇನ್ನು ಮುಂದೆ.. ಇನ್ನು ಮುಂದೆ ಅಂತ ಸಾಗುತ್ತದೋ, ಹಾಗೇ ಕೊನೆಯಿಲ್ಲದ ಯಾನಕ್ಕೆ ಸ್ಪೇಸ್‌ ಶಿಪ್ಪನ್ನ ಕಳಿಸಿದ್ರು. ಕಲ್ಪನೆ ಮಾಡಿದ್ರೂ ಸಹ ಪೃಥ್ವಿ, ಜಗತ್ತು, ಕುರುಕ್ಷೇತ್ರ, ಮಹಾಭಾರತ ಎಲ್ಲವೂ ಇರುತ್ತಿತ್ತು. ಆಕಾಶಕ್ಕಿಂತಲೂ ಎತ್ತರ, ಹಿಮಾಲಕ್ಕಿಂತಲೂ ದೊಡ್ಡ ಮನುಷ್ಯ ಅವರು. ಅವರನ್ನ ಕಳೆದುಕೊಂಡು ನಾವಿಂದು ಬಡವಾಗಿದ್ದೇವೆ ಎಂದು ಭಾವುಕರಾದರು.