ಬೀದರ್: ಸಾಲ ತೀರಿಸಲಾಗದೆ ಮನನೊಂದು ಒಂದೇ ದಿನ ಜಿಲ್ಲೆಯ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಭಾಲ್ಕಿ ತಾಲ್ಲೂಕಿನ ಖಾನಾಪೂರದ ಯುವ ರೈತ ಕಾರ್ತಿಕ್ (21) ಹಾಗೂ ಬಸವಕಲ್ಯಾಣ ತಾಲ್ಲೂಕಿನ ಇಲ್ಲಾಳ ಗ್ರಾಮದ ರೈತ ಜಗದೀಶ ರೆಡ್ಡಿ ಪ್ರಲ್ಹಾದ ರೆಡ್ಡಿ (49) ಮೃತ ರೈತರು.
ಕಾರ್ತಿಕ್ ಅವರು ಖಾನಾಪೂರದ ಅರಣ್ಯ ಪ್ರದೇಶದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಜೀವ ತ್ಯಜಿಸಿದ್ದಾರೆ. ಜಮೀನು ಗುತ್ತಿಗೆ ಪಡೆದು ಬೇಸಾಯಕ್ಕಾಗಿ ಖಾಸಗಿ ಹಾಗೂ ಬ್ಯಾಂಕಿನಿಂದ ಒಟ್ಟು ₹4 ಲಕ್ಷ ಸಾಲ ಮಾಡಿಕೊಂಡಿದ್ದರು. ನಿರೀಕ್ಷಿಸದಷ್ಟು ಆದಾಯ ಬರದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಧನ್ನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು, ಜಗದೀಶ ರೆಡ್ಡಿ ಅವರು ಬಾವಿಗೆ ಹಾರಿ ಜೀವ ಬಿಟ್ಟಿದ್ದಾರೆ. ಬ್ಯಾಂಕಿನಲ್ಲಿ ₹1.25 ಲಕ್ಷ ಹಾಗೂ ಕೈಸಾಲ ಮಾಡಿಕೊಂಡಿದ್ದರು. ರೇಷ್ಮೆ ಕೃಷಿಯಲ್ಲಿ ನಷ್ಟ ಉಂಟಾಗಿದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರಿಗೆ ಪತ್ನಿ, ಮಗ, ಮಗಳು ಇದ್ದಾರೆ. ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡೂ ಘಟನೆ ಮಂಗಳವಾರ ನಡೆದಿವೆ.