ಮುಂಬೈ : ಜ.11 ರಿಂದ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಏಕದಿನ ಹಾಗೂ ಟಿ20 ದ್ವಿಪಕ್ಷೀಯ ಸರಣಿ ಆರಂಭವಾಗಲಿದೆ. ಆದ್ರೆ ಈ ಸರಣಿಗೂ ಮುನ್ನವೇ ಟೀಂ ಇಂಡಿಯಾಕ್ಕೆ ಬಿಗ್ ಶಾಕ್ ತಟ್ಟಿದ್ದು, ತಿಲಕ್ ವರ್ಮಾ ವಿಶ್ವಕಪ್‌ನಲ್ಲಿ ಆಡೋದೇ ಡೌಟ್ ಅಂತ ಹೇಳಲಾಗ್ತಿದೆ.
ಕಿವೀಸ್ ವಿರುದ್ಧ ಮೊದಲು 3 ಪಂದ್ಯಗಳ ಏಕದಿನ ಸರಣಿ, ಬಳಿಕ ಟಿ20 ಸರಣಿಗಳು ನಡೆಯಲಿವೆ. ಈ ಸರಣಿ ಟಿ20 ವಿಶ್ವಕಪ್ ದೃಷ್ಟಿಯಿಂದ ಮಹತ್ವ ಪಡೆದಿದೆ. ಅಲ್ಲದೇ ಟಿ20 ವಿಶ್ವಕಪ್‌ಗೂ ಮುನ್ನ ನ್ಯೂಜಿಲೆಂಡ್ ಸರಣಿಯಲ್ಲಿ ಟೀಂ ಇಂಡಿಯಾ ತನ್ನ ಪ್ಲೇಯಿಂಗ್ ಇಲೆವೆನ್ ಖಚಿತ ಪಡಿಸಿಕೊಳ್ಳಬೇಕಿದೆ. ಆದರೆ ಕಿವೀಸ್ ವಿರುದ್ಧದ ಸರಣಿಗೂ ಮುನ್ನವೇ ಟೀಂ ಇಂಡಿಯಾಕ್ಕೆ ಮಾಸ್ಟರ್ ಸ್ಟ್ರೋಕ್ ಕೊಟ್ಟಂತಾಗಿದೆ.
ಅಗ್ರ ಕ್ರಮಾಂಕದ ಬ್ಯಾಟರ್‌ಗಳಲ್ಲಿ ಒಬ್ಬರಾದ ತಿಲಕ್ ವರ್ಮಾ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ತಿಲಕ್ ವರ್ಮಾ ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಈಗ ಇವರು ಹೊಟ್ಟೆಯ ಗಾಯದಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.
ತಿಲಕ್ ವರ್ಮಾ ಅವರ ಗಾಯಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಈ ಗಾಯದಿಂದ ತಿಲಕ್ ಚೇತರಿಸಿಕೊಳ್ಳಲು 3-4 ವಾರಗಳಷ್ಟು ಸಮಯ ತೆಗೆದುಕೊಳ್ಳಬಹುದು. ಇವರು ನ್ಯೂಜಿಲೆಂಡ್ ವಿರುದ್ದದ ಸರಣಿಯನ್ನ ಮಿಸ್ ಮಾಡಿಕೊಳ್ಳುವ ಸಾಧ್ಯತೆ ಇದೆ. ಆದ್ರೆ ಟಿ20 ವಿಶ್ವಕಪ್‌ಗೆ ಮುನ್ನ ಸಂಪೂರ್ಣವಾಗಿ ಫಿಟ್ ಆಗುತ್ತಾರಾ ಇಲ್ವಾ? ಅನ್ನೋದನ್ನ ಕಾದುನೋಡಬೇಕಿದೆ.
ತಿಲಕ್ ವರ್ಮಾ ಸದ್ಯ ದೇಶೀಯ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿದ್ದಾರೆ. ರಾಜ್‌ಕೋಟ್‌ನಲ್ಲಿ ಪಂದ್ಯ ಆಡುವಾಗ ತಿಲಕ್‌ಗೆ ಗಾಯ ಕಾಣಿಸಿಕೊಂಡಿದೆ. ಬಳಿಕ ಇವರನ್ನು ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ವೈದ್ಯರನ್ನು ಸಂಪರ್ಕಿಸಿದರು. ಬಳಿಕ ಇವರು ಸ್ಕ್ಯಾನ್‌ಗೆ ಒಳಪಟ್ಟರು.
ಈ ವರದಿಯನ್ನು ಪರಿಶೀಲಿಸಿದ ವೈದ್ಯರು ಶಸ್ತ್ರ ಚಿಕಿತ್ಸೆಗೆ ಶಿಫಾರಸು ಮಾಡಿದ್ದಾರೆ. ಈ ಗಾಯ ಮಾಸಲು 3-4 ವಾರಗಳ ಅವಶ್ಯಕತೆ ಇದೆ ಎಂದು ವೈದ್ಯರು ಸಲಹೆ ನೀಡಿರುವುದಾಗಿ ತಿಳಿದುಬಂದಿದೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ತಿಲಕ್ ವರ್ಮಾ ತಂಡದಿಂದ ಹೊರ ನಡೆಯುವ ಸಾಧ್ಯತೆ ದಟ್ಟವಾಗಿದ್ದು, ಇವರಿಗೆ ಬದಲಿ ಆಟಗಾರರನ್ನು ಬಿಸಿಸಿಐ ಘೋಷಿಸಲಿದೆ.
ಆಸ್ಟ್ರೇಲಿಯಾದಲ್ಲಿ ನಡೆದಿದ್ದ 3ನೇ ಏಕದಿನ ಪಂದ್ಯದ ವೇಳೆ ಕ್ಯಾಚ್ ಹಿಡಿಯುವಾಗ ಗಾಯಕ್ಕೆ ತುತ್ತಾಗಿದ್ದ ಶ್ರೇಯಸ್ ಅಯ್ಯರ್ ಈಗ ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ಎಂದು ಬಿಸಿಸಿಐ ವೈದ್ಯಕೀಯ ತಂಡ ಘೋಷಿಸಿದೆ. ಅಲ್ಲದೇ ಮುಂಬೈ ಪರ ವಿಜಯ್ ಹಜಾರೆ ಟ್ರೋಫಿಯ ಲೀಗ್ ಹಂತದ ಕೊನೆಯ ಪಂದ್ಯವನ್ನು ಆಡಲಿದ್ದಾರೆ ಎಂದು ತಿಳಿದುಬಂದಿದೆ.















