ಮನೆ ಸುದ್ದಿ ಜಾಲ ರಾತ್ರೋರಾತ್ರಿ ಎನ್ ಟಿಎಂ ಶಾಲೆ ಹಳೆಯ ಕಟ್ಟಡ ನೆಲಸಮ

ರಾತ್ರೋರಾತ್ರಿ ಎನ್ ಟಿಎಂ ಶಾಲೆ ಹಳೆಯ ಕಟ್ಟಡ ನೆಲಸಮ

0

ಮೈಸೂರು: ನಗರದ ಮಹಾರಾಣಿ (ಮಾದರಿ) ಎನ್‌ಟಿಎಂ ಶಾಲೆಯ ಹಳೆಯ ಕಟ್ಟಡವನ್ನು ನೆಲಸಮ ಮಾಡುವ ಕಾರ್ಯವನ್ನು ಜಿಲ್ಲಾಡಳಿತ ಸೋಮವಾರ ತಡರಾತ್ರಿ ಆರಂಭಿಸಿದ್ದು, ಈ  ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದ ಹೋರಾಟಗಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

ಶಾಲಾ ಕಟ್ಟಡ ನೆಲಸಮ ಕಾರ್ಯಾಚರಣೆ ಆರಂಭಕ್ಕೂ ಮುನ್ನ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ಸಂಚಾರವನ್ನು ನಿರ್ಬಂಧಿಸಲಾಯಿತು. 200ಕ್ಕೂ ಅಧಿಕ ಪೊಲೀಸರು ಸ್ಥಳದಲ್ಲಿ ಜಮಾಯಿಸಿದರು. ಕಟ್ಟಡ ಇರುವ ಸ್ಥಳಕ್ಕೆ ಹೋಗಲು ಮುಂದಾದ ಜೆಸಿಬಿ ಯಂತ್ರದ ಮುಂದೆ ಮಹಾರಾಣಿ (ಮಾದರಿ) ಎನ್‌ಟಿಎಂ ಶಾಲೆ ಉಳಿಸಿ ಹೋರಾಟ ಒಕ್ಕೂಟದ ಮುಖಂಡರು ಮಲಗಿ ಪ್ರತಿಭಟನೆ ನಡೆಸಿದರು.

ಶಾಲೆ ಒಡೆಯಬೇಕು ಎಂದು ಸರ್ಕಾರ ನೀಡಿರುವ ಆದೇಶ ಪ್ರತಿಯನ್ನು ಪೊಲೀಸರು ತೋರಿಸಿ, ಮನವೊಲಿಸಲು ಯತ್ನಿಸಿದರಾದರೂ ಪ್ರತಿಭಟನಕಾರರು ಒಪ್ಪಲಿಲ್ಲ. ಹಠ ಬಿಡದೆ ಜೆಸಿಬಿ ಮುಂದೆ ಮಲಗಿದ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಬಳಿಕ 4 ಜೆಸಿಬಿಗಳಿಂದ ಕಟ್ಟಡ ತೆರವು ಕಾರ್ಯಾಚರಣೆ ಆರಂಭವಾಯಿತು.

ಹೋರಾಟಗಾರರಾದ ಸ.ರ.ಸುದರ್ಶನ್, ಉಗ್ರನರಸಿಂಹೇಗೌಡ, ಹೊಸಕೋಟೆ ಬಸವರಾಜು, ಮರಂಕಯ್ಯ, ಕರುಣಾಕರ್, ಬಾಲಕೃಷ್ಣ ಇದ್ದರು.

ಎನ್‌ಟಿಎಂ ಶಾಲೆಯನ್ನು ಈಚೆಗಷ್ಟೇ ಹಳೆಯ ಕಟ್ಟಡದ ಎದುರಿನ ಮಹಾರಾಣಿ ಶಿಕ್ಷಕಿಯರ ತರಬೇತಿ ಕೇಂದ್ರದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಹಳೆಯ ಹೆಸರನ್ನೇ ಮುಂದುವರಿಸಲಾಗುವುದು ಡಿಡಿಪಿಐ ರಾಮಚಂದ್ರರಾಜೇ ಅರಸ್ ತಿಳಿಸಿದ್ದರು.

ವಿವಾದದ ಹಿನ್ನೆಲೆ:

ಸ್ವಾಮಿ ವಿವೇಕಾನಂದ ಅವರು ಮೈಸೂರಿಗೆ ಬಂದಿದ್ದಾಗ ಈಗಿನ ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆ ಹಾಗೂ ಪಕ್ಕದ ನಿರಂಜನ ಮಠದಲ್ಲಿ ತಂಗಿದ್ದರು ಎಂಬ ಕಾರಣಕ್ಕೆ ಮನಮೋಹನ ಸಿಂಗ್‌ ಪ್ರಧಾನಿಯಾಗಿದ್ದಾಗ ರಾಷ್ಟ್ರೀಯ ಅನುಷ್ಠಾನ ಸಮಿತಿಯು ಸ್ವಾಮಿ ವಿವೇಕಾನಂದರು ತಂಗಿದ್ದ ಸ್ಥಳಗಳಲ್ಲಿ ಸ್ಮಾರಕ ನಿರ್ಮಿಸುವಂತೆ ನಿರ್ಣಯಿಸಿತ್ತು. ಹಾಗಾಗಿ, ಇಲ್ಲಿ ಸ್ಮಾರಕದ ಜತೆಗೆ, ವಿವೇಕಾನಂದ ಸಾಂಸ್ಕೃತಿಕ ಕೇಂದ್ರವನ್ನು ನಿರ್ಮಿಸಲು ರಾಮಕೃಷ್ಣ ಆಶ್ರಮ ಬೃಹತ್ ಯೋಜನೆಯೊಂದನ್ನು ರೂಪಿಸಿತ್ತು. ಇದರ ವಿರುದ್ಧ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಹಾರಾಣಿ (ಎನ್‌ಟಿಎಂ) ಮಾದರಿ ಶಾಲೆ ಉಳಿಸಿ ಹೋರಾಟ ಒಕ್ಕೂಟವನ್ನು ರಚಿಸಿಕೊಂಡು ನಿರಂತರವಾಗಿ ಪ್ರತಿಭಟನೆಗಳನ್ನು ನಡೆಸುತ್ತಿದ್ದರು. ಹೈಕೋರ್ಟ್ ನಲ್ಲಿ ಆಶ್ರಮ ಪರವಾಗಿ ತೀರ್ಪು ಹೊರಬಿದ್ದಿತ್ತು. ಬಳಿಕ ಸರ್ಕಾರ ಶಾಲೆಯನ್ನು ಎದುರಿನ ಕಟ್ಟಡಕ್ಕೆ ಸ್ಥಳಾಂತರ ಮಾಡಿ ಕಟ್ಟಡ ಒಡೆಯಲು ಆದೇಶಿಸಿತ್ತು.

ಹಿಂದಿನ ಲೇಖನಎಲ್ಲಾ ಇಲಾಖೆಗಳಲ್ಲಿ ನಗದು ನಿರ್ವಹಣೆ `ವಹಿ’ ಘೋಷಿಸಲು ಸೂಚನೆ
ಮುಂದಿನ ಲೇಖನಕೊರೋನಾ: ದೇಶದಲ್ಲಿಂದು 67 ಸಾವಿರ ಹೊಸ ಕೇಸ್ ಪತ್ತೆ