ಹಣ ಅಂದ್ರೆ ಹೆಣ ಕೂಡ ಬಾಯಿ ಬಿಡುತ್ತೆ ಅನ್ನೋ ಮಾತು ಬಿಹಾರದಲ್ಲಿ ನಡೆದ ಈ ಘಟನೆಯಿಂದ ನಿಜ ಎನಿಸಬಹುದು. ಹೌದು ಬಿಹಾರದಲ್ಲಿ ಇಂತಹದೊಂದು ವಿಚಿತ್ರ ಘಟನೆ ನಡೆದಿದೆ. ಬಿಹಾರದ ರೋಹ್ತಾಸ್ ಜಿಲ್ಲೆಯ ಚರಂಡಿಯಲ್ಲಿ ಜನ ಹಣವನ್ನು ಹುಡುಕಿರುವ ಘಟನೆ ನಡೆದಿದೆ. ಮುಖ ಕಿವಿಚಿದರೂ ಈ ಮಾತು ನಿಜ.
ಮುಂಜಾನೆ ಚರಂಡಿಯೊಳಗೆ 2,000, 500, 100 ಮತ್ತು 10 ರೂ ಮುಖಬೆಲೆಯ ನೋಟುಗಳಿರುವ ಚೀಲಗಳನ್ನು ನೋಡಿದ್ದೇವೆ ಎಂದು ಸ್ಥಳೀಯ ಗ್ರಾಮಸ್ಥರು ಹೇಳಿದ್ದಾರೆ. ಹೀಗಾಗಿ ಕೂಡಲೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಧಾವಿಸಿ ಚರಂಡಿಗಿಳಿದಿದ್ದಾರೆ. ನೋಟುಗಳನ್ನು ಸಂಗ್ರಹಿಸತೊಡಗಿದ್ದಾರೆ. ನೋಟುಗಳು ಅಸಲಿ ಎಂದು ಕೂಡ ಹೇಳಿಕೊಂಡಿದ್ದಾರೆ.
ಬಿಹಾರದ ರೋಹ್ತಾಸ್ ಜಿಲ್ಲೆಯ ಚರಂಡಿಯಲ್ಲಿ ನೋಟುಗಳು ಕಂಡು ಬಂದಿದ್ದು ಹಲವಾರು ಜನರು ಸಾಧ್ಯವಾದಷ್ಟು ನೋಟುಗಳನ್ನು ದೋಚಲು ಚರಂಡಿಗೆ ಇಳಿದಿದ್ದಾರೆ. ನಾ ಮುಂದು ತಾ ಮುಂದು ಎನ್ನುತ್ತಾ ನೋಟು ಸಂಗ್ರಹ ಮಾಡಿದ್ದಾರೆ. ಮೊರಾದಾಬಾದ್ ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದ್ದು, ಹಲವಾರು ಜನರು ಚರಂಡಿಗೆ ನುಗ್ಗಿ 2,000, 500, 100 ರೂಪಾಯಿ ಮುಖ ಬೆಲೆಯ ನೋಟುಗಳನ್ನು ಸಂಗ್ರಹಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ಮಧ್ಯೆ, ನೋಟುಗಳು ಅಸಲಿಯೇ ಮತ್ತು ಅವುಗಳನ್ನು ಯಾರು ಚರಂಡಿಗೆ ಎಸೆದರು ಎಂಬ ಬಗ್ಗೆ ಜಿಲ್ಲಾಡಳಿತ ತನಿಖೆ ನಡೆಸುತ್ತಿದೆ.