ಪಟ್ನಾ: ಮೇ 5ರಂದು ನಡೆದ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪರೀಕ್ಷಾರ್ಥಿಗಳು ಸೇರಿದಂತೆ 13 ಮಂದಿಯನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಈವರೆಗೆ ಪಟ್ನಾ ಪೊಲೀಸರ ವಿಶೇಷ ತಂಡವು ತನಿಖೆ ನಡೆಸುತ್ತಿತ್ತು. ಇದೀಗ ಪ್ರಕರಣದ ತನಿಖೆಯನ್ನು ಆರ್ಥಿಕ ಅಪರಾಧಗಳ ಘಟಕಕ್ಕೆ (ಇಒಯು) ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಒಬ್ಬರು ಬಿಹಾರ ಲೋಕಸೇವಾ ಆಯೋಗವು (ಬಿಪಿಎಸ್‌ಸಿ) ಈಚೆಗೆ ನಡೆಸಿದ್ದ ಶಿಕ್ಷಕರ ನೇಮಕಾತಿ ಪರೀಕ್ಷೆಯ (ಟಿಆರ್‌ಇ-3) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಇಒಯು ತಿಳಿಸಿದೆ.
ಎಲ್ಲಾ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಆರೋಪಿಗಳ ಬಳಿ ಇದ್ದ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಒಯು ಹೇಳಿದೆ.
Saval TV on YouTube