೧. ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವನು ಅಲಂಕಾರ ಪ್ರೀಯನು. ಸುಂದರ ದೇಹದಾರ್ಡವು ಈತನು ಬುದ್ದಿವಂತನೂ, ವಿದ್ಯಾವಂತನೂ, ವಿನಯಶಾಲಿಯೂ, ಸತ್ಯವಾದಿಯೂ ಆಗಿದ್ದು, ತನ್ನ ಆದಾಯ-ಉತ್ಪನ್ನಗಳ ಬಗ್ಗೆ ಸದಾ ಜಾಗರೂಕನಾಗಿರುವನು. ನಾನಾ ವಿಧ ವೇಷಭೂಷಣ, ಆಭರಣ ಪ್ರೀಯನೂ ಸದಾ ಸಂತೋಷಭರಿತನೂ ವಿಶೇಷ.ಸಂತಾನ ಸಮೃದ್ರಿಯನ್ನು ಹೊಂದಿದವನಾಗುತ್ತಾನೆ.
ಚರಣ ಫಲ : ಅಶ್ವಿನಿ ನಕ್ಷತ್ರದ ೧ನೇ ಚರಣದಲ್ಲಿ ಜನಿಸಿದಾತನು ಪರರ ದ್ರವ್ಯಆಸ್ತಿ-ಪಾಸ್ತಿಗಳನ್ನು ಅಪಹರಿಸುವವನು, ಜಿಪುಣನು, ವಿಶೇಷ ಪ್ರಯತ್ನಶೀಲನು, ಸಾಹಸಿಯು, ಆದರೂ ನೀಚ ವ್ಯಭಿಚಾರ ಗುಣವುಳ್ಳವನು. ೨ನೇ ಚರಣದಲ್ಲಿ ಜನಿಸಿದಾತನು ಒಳ್ಳೇ ಸುಸ್ವಭಾವಿಯೂ, ಸಜ್ಜನನೂ ಧನ-ಧಾನ್ಯ ಸಂಪದಭಿವೃದ್ಧಿಯನ್ನು ಪಡೆಯುವವನೂ, ಬಂಧು-ಮಿತ್ರರಲ್ಲಿ, ಸರಕಾರದಲ್ಲಿ ವಿಶೇಷ ಆದರಣೀಯನೂ, ಮೃಷ್ಟಾನ್ನ ಭೋಜನ ಸುಖಿಯೂ ಧರ್ಮದಿಂದ ನಡೆಯತಕ್ಕವನೂ ಆಗುವನು. ೩ ನೇ ಚರಣದಲ್ಲಿ ಜನಿಸಿದವನು ಲಲಿತ ಕಲೆಗಳಲ್ಲಿ ವಿದ್ಯಾವಂತನೂ, ಪ್ರಾಪಂಚಿಕ ವ್ಯವಹಾರಗಳಲ್ಲಿ ಯುಕ್ತಿವಂತನೂ, ಸಮಯ ಬಂದರೆ ಹಟವಾದಿಯಾಗಿ ಕಾರ್ಯ ನೆರವೇರಿಸಿಕೊಳ್ಳುವವನೂ ಆಗುತ್ತಾನೆ. ೪ನೇ ಚರಣದಲ್ಲಿ ಜನಿಸಿದವನು ಗುರು ದೇವತಾ ಕಾರ್ಯಗಳನ್ನು ಮೆಚ್ಚುವವನೂ, ಅದರಲ್ಲಿ ಹೆಚ್ಚು ಆಸಕ್ತನೂ, ಸ್ವಧರ್ಮದಲ್ಲಿ ಅಭಿಮಾನವುಳ್ಳವನೂ, ಶ್ರೀಮಂತನೂ, ಸ್ತ್ರೀಮೋಹಿಯೂ ಆಗಿರುತ್ತಾನೆ.
ವಿಶೇಷ : ಈ ನಕ್ಷತ್ರದ ೧ನೇ ಚರಣದಲ್ಲಿ ಕೂಸು ಜನಿಸಿದರೆ ತಂದೆಗೆ ಅರಿಷ್ಟವು. ಅದರಲ್ಲಿಯೂ ಈ ನಕ್ಷತ್ರದ ಆರಂಭದ ಎರಡು ಘಳಿಗೆಯೊಳಗಾಗಿ ಜನಿಸಿದರೆ ಮಹಾ ದೋಷವುಂಟು. ಆದ್ದರಿಂದ, ಕೂಸಿನ ತಂದೆಯು ೩ ತಿಂಗಳುಗಳವರೆಗೆ ಕೂಸಿನ ಮುಖ ನೋಡಬಾರದು. ಈ ದೋಷ ನಿವಾರಣಾರ್ಥವಾಗಿ ಪೂಜ್ಯರಿಗೆ ಅಥವಾ ತನ್ನ ಮನೆತನದ ಗುರುಗಳಿಗೆ ಬಂಗಾರ ದಾನ ಮಾಡಬೇಕು.
ಕಂಟಕಾದಿಗಳು : ಈ ನಕ್ಷತ್ರದಲ್ಲಿ ಜನಿಸಿದವನಿಗೆ ಜನಿಸಿದ ೧ನೇ ವರ್ಷದಲ್ಲಿ ಅಗ್ನಿಭಯವು. ೨ನೇ ವರ್ಷದಲ್ಲಿ ಜ್ವರಾದಿ ರೋಗ ಪೀಡೆಯು. ೩ನೇ ವರ್ಷದಲ್ಲಿ ಉದರ ಸಂಬಂಧಿತ ರೋಗ ಭಯವು. ೪ ಅಥವಾ ೫ನೇ ವರ್ಷದಲ್ಲಿ ಕಣ್ಣಿನ ಸಂಬಂಧ ರೋಗವು. ೬ ಅಥವಾ ೭ನೇ ವರ್ಷದಲ್ಲಿ ಪರರಿಂದ ಜೀವಘಾತಕ ಭಯವು ಇಲ್ಲವೆ ಧರಿಸಿಕೊಂಡಂಥ ಆಭರಣಗಳ ಅಪಹರಣ ಕಾಲಕ್ಕೆ ಪ್ರಾಣಭಯವೂ ಆಗಬಹುದು. ೧೦ನೇ ವರ್ಷದಲ್ಲಿ ಅಥವಾ ೨೦ರಲ್ಲಿ ಅಪಮೃತ್ಯು ಭಯ (ಎಡವಿ ಬೀಳುವದು, ಎತ್ತರದ ಸ್ಥಳದ ಮೇಲಿಂದ ಬೀಳುವದು, ವಾಹನಗಳ ಮೇಲಿಂದ ಬೀಳುವದು). ೨೪ನೇ ವರ್ಷದಲ್ಲಿ ವನ್ಯ ಮೃಗಗಳಿಂದ ಪ್ರಾಣಕ್ಕೆ ಭಯವು. ೪೦ ಅಥವಾ ೬೪ನೇ ವರ್ಷದಲ್ಲಿ ಯಾವದೋ ಘನ ರೋಗ ಭಯವುಂಟು. ಪ್ರಾಣಕ್ಕೆ ಕುಂದಿಲ್ಲ. ಇವೆಲ್ಲ ಕಂಟಕಾದಿಗಳಿಂದ ಪಾರಾದರೆ ಈ ಜಾತಕನಿಗೆ ೯೬ ವರ್ಷ ಆಯುಷ್ಯವು.
ಅಶ್ವಿನಿ ನಕ್ಷತ್ರವು: ಆಶ್ವಯೋನಿ , ದೇವಗಣ, ಆದಿನಾಡಿ, ಕ್ರಿಪ್ರ ಸಂಜ್ಞೆ, ಮಂದಲೋಚನ ವುಳ್ಳದು. ಈ ನಕ್ಷತ್ರದ ಆರಾಧ್ಯ ವೃಕ್ಷವು ಖದೀರ ವೃಕ್ಷ (ಕಗ್ಗಲಿ ಮರ). ಈ ಜಾತಕನು ಈ ಗಿಡದ ಸಸಿಯನ್ನು ನೀರು ಹಾಕಿ ಬೆಳೆಸಿದರೆ ಸರ್ವ ರೀತಿಯಿಂದಲೂ ಸುಖವಾಗುವದು. ಕಂಟಕಗಳು ಶಾಂತವಾಗುವವು ವಂಶ ವೃದ್ಧಿಯಾಗುವದು.
೨. ಭರಣಿ ನಕ್ಷತ್ರದಲ್ಲಿ ಹುಟ್ಟಿದವನು ಯಾವಾಗಲೂ ಸೋಮಾರಿಯೇ ಆಗಿರುವನು ಹೇಡಿಯು, ಪರರ ನಿಂದೆಯನ್ನು ಮಾತ್ರ ಮಾಡುವವನು, ಚಂಚಲ ಮನಸ್ಸಿನ ಈತನು ದುರ್ಗುಣಿಯಾಗುತ್ತಾನೆ. ಜಲಾಶಯದಿಂದ ದೂರವಾಗಿರಲು ಇಚ್ಚಿಸುವವನು. ನಿರುದ್ಯೋಗಿಯಾಗಿದ್ದು ಯಾವಾಗಲೂ ಹರಟೆಗಳಲ್ಲಿ ಕಾಲ ಕಳೆಯುವವನು.
ಚರಣ ಫಲವು : ಈ ನಕ್ಷತ್ರದ ೧ನೇ ಚರಣದಲ್ಲಿ ಜನಿಸಿದವನು ರಾಜಭೋಗಿಯು ಶೂರನೂ, ಧೀರನೂ, ಕೀರ್ತಿಶಾಲಿಯೂ, ಧೈರ್ಯವಂತನೂ, ಸಾಹಸ ಪ್ರವೃತ್ತಿಯವನೂ ಆಗುತ್ತಾನೆ. ೨ನೇ ಚರಣದಲ್ಲಿ ಜನಿಸಿದವನು ವಿದ್ಯಾವಂತನಾದರೂ ಪೌರುಷವಿಲ್ಲದವನು. ಲೋಭಿಯೂ, ವಂಚಕ ಬುದ್ದಿಯುಳ್ಳವನೂ ಆಗುವನು. ೩ ನೇ ಚರಣದಲ್ಲಿ ಜನಿಸಿದವನು ಶೂರನೂ, ಧೀರನೂ, ಸಾಹಸ ಮನಸ್ಸಿನವನೂ, ಜನರಿಂದ ಮನ್ನಣೆ ಹೊಂದುವವನೂ, ಶ್ರೀಮಂತನೂ ಆಗುವನು. ೪ನೇ ಚರಣದಲ್ಲಿ ಜನಿಸಿದವನು ಹಠವಾದಿಯೂ, ನಿಷ್ಟುರನೂ, ಹೆಚ್ಚು ಮಕ್ಕಳ ತಂದೆಯೂ, ಮತ್ಸರ ಸ್ವಭಾದವನೂ, ಇತರರಿಗೆ ಹಿಂಸೆ ಮಾಡುವದರಲ್ಲಿ ಸೊಂತೋಷವನ್ನು ಹೊಂದುವವನೂ, ಮೋಸಗಾರನೂ, ಶೀಘ್ರ ಕೋಪಿಯೂ ಆಗುವನು.
ಕಂಟಕಾದಿಗಳು : ಈ ನಕ್ಷತ್ರದಲ್ಲಿ ಜನಿಸಿದವನಿಗೆ ೧ನೇ ತಿಂಗಳಲ್ಲಾಗಲಿ ಇಲ್ಲವೆ ೧ನೇ ವರ್ಷದಲ್ಲಿಯಾಗಲಿ ಅಥವಾ ೪ನೇ ವರ್ಷದಲ್ಲಾಗಲಿ ಅಪಮೃತ್ಯು ಭಯ ಉಂಟು. 7 ನೇ ವರ್ಷದಲ್ಲಿ ಶತ್ರುಭೀತಿಯು ಹಾಗೂ ರೋಗ ಭಯವುಂಟು. ೧೧ ಅಥವಾ ೧೨ ನೇ ವರ್ಷದಲ್ಲಿ ಅಗ್ನಿ ಭಯವುಂಟು. ಈ ಜಾತಕನಿಗೆ ೨೦ನೇ ವರ್ಷದಲ್ಲಿ ವಿಚಿತ್ರವೆನ್ನಿಸುವ ರೋಗಭಯವು. ೨೭ನೇ ವರ್ಷದಲ್ಲಿ ಜಲಗಂಡ ಅಥವಾ ಶತೃ ಭಯವು. ೩೭ನೇ ವರ್ಷಕ್ಕೆ ಜ್ವರ ಮೊದಲಾದ ರೋಗ ಭಯವುಂಟು. ೪೮ ನೇ ವರ್ಷಕ್ಕೆ ಶತೃಭಯ. ೫೦ ನೇ ವರ್ಷಕ್ಕೆ ಅಪಮೃತ್ಯು ಭಯವು. ೭೬ ನೇ ವರ್ಷಕ್ಕೆ ಮೃಗ ಭಯವು. ಇವೆಲ್ಲವುಗಳನ್ನು ದಾಟಿದರೆ ಈ ಜಾತಕನಿಗೆ ೯೦ ವರ್ಷ ಆಯುಷ್ಯ.
ವಿಶೇಷ ವಿಚಾರ : ಈ ನಕ್ಷತ್ರವು ಗಜಯೋನಿ, ಮನುಷ್ಯಗಣ, ಮಧ್ಯನಾಡಿ, ಉಗ್ರ ಸಂಜ್ಞೆ, ಮಧ್ಯಲೋಚನವಿದ್ದು ಈ ನಕ್ಷತ್ರದ ಆರಾಧ್ಯ ವೃಕ್ಷವು ನೆಲ್ಲಿ ಮರ. ಈ ಜಾತಕನು ಈ ವೃಕ್ಷದ ಗಿಡದ ಸಸಿಯನ್ನು ಹಚ್ಚಿ ನೀರು ಹಾಕಿ ಬೆಳೆಯಿಸಿ ಸಂರಕ್ಷಣ ಮಾಡುತ್ತಿದ್ದರೆ ಅವನಿಗಿರುವ ಕಾಡಾಟ-ಕಂಟಕಗಳು ನಿವಾರಣೆಯಾಗುತ್ತವೆ.
೩. ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿದವನು ಭೋಜನ ಪ್ರೀಯನು. ಆದರೆ ಸುಳ್ಳು
ಮಾತನಾಡುವವನೂ, ಉಪಕಾರಗೇಡಿಯೂ, ದುಷ್ಟ ಕಾರ್ಯಗಳನ್ನು ಮಾಡುವದರಲ್ಲಿ ಸಂತೋಷಪಡುವವನೂ, ದರಿದ್ರನೂ, ಕಾರಣವಿಲ್ಲದೇ ಸಂಚಾರ ಪ್ರವೃತ್ತಿಯುಳ್ಳವನೂ ಆಗುತ್ತಾನೆ.
ಚರಣ ಫಲವು : ಈ ನಕ್ಷತ್ರದ ೧ನೇ ಚರಣದಲ್ಲಿ ಜನಿಸಿದಾತನು ಪರೋಪಕಾರಿಯೂ,ಪ್ರಾಮಾಣಿಕ ತಜ್ಞ ಸೇವಕರುಳ್ಳವನೂ, ಕೀರ್ತಿಶಾಲಿಯೂ, ಕಾರ್ಯದಲ್ಲಿ ದಕ್ಷತೆಯುಳ್ಳವನೂ, ಒಳ್ಳೇ ಬಂಧು-ಮಿತ್ರರನ್ನು ಹೊಂದಿದವನೂ ಆಗುವನು. ೨ ನೇ ಚರಣದಲ್ಲಿ ಜನಿಸಿದವನು ಕಲಾತಜ್ಞನೂ, ಕರ್ತವ್ಯದಲ್ಲಿ ದಕ್ಷತೆಯನ್ನು ಹೊಂದಿದವನೂ, ಸ್ವಜನರನ್ನೇ ನಂಬದವನೂ, ಗುಪ್ತ ಆಲೋಚನೆಯಲ್ಲಿ ನಿಷ್ಣಾತನೂ, ಜಿಪುಣನೂ ಆಗುವನು, ೩ ನೇ ಚರಣದಲ್ಲಿ ಜನಿಸಿದವನು ಪರರಿಗೆ ಕೆಡಕು ಮಾಡುವವನೂ, ದುರಾಚಾರಿಯೂ, ದುಷ್ಟ ಚಟಗಳು ಳ್ಳವನೂ, ಹಿಂಸಾ ಪ್ರವೃತ್ತಿಯುಳ್ಳವನೂ, ಸಿಟ್ಟು ಮತ್ತು ಕ್ರೂರ ಸ್ವಭಾವದವನೂ ಆಗುತ್ತಾನೆ. ೪ನೇ ಚರಣದಲ್ಲಿ ಜನಿಸಿದವನು ವಿದ್ಯಾವಂತನೂ, ಗುಣವಂತನೂ, ಕೀರ್ತಿಶಾಲಿಯೂ, ಆಚಾರಶೀಲನೂ, ಗುರು-ಹಿರಿಯರಲ್ಲಿ, ದೇವರಲ್ಲಿ ಭಯ-ಭಕ್ತಿಯುಳ್ಳವನಾಗುತ್ತಾನೆ. ಶ್ರೀಮಂತನೂ ಆಗುವನು. ಇನ್ನು ೪ ನೇ ಚರಣದ ಮೊದಲ ೮ ಘಳಿಗೆಯೊಳಗಾಗಿ ಈ ಜಾತಕನು ಜನಿಸಿದರೆ ಕೂಸಿನ ತಾಯಿಗೆ ಮಾತ್ರ ಪೀಡೆಯು, ಕಾರಣ ಈ ದೋಷ ನಿವಾರಣೆಗಾಗಿ ಹಿತ್ತಾಳೆಯ ದೇವರ ವಿಗ್ರಹವನ್ನು ಯಥೋಚಿತ ದಾನ ಕೊಡಬೇಕು.
ಕಂಟಕಾದಿಗಳು : ಜನನದಿಂದ ೩ನೇ ತಿಂಗಳಲ್ಲಿ ಜ್ವರಾದಿಗಳ ಪೀಡೆಯು, ೧ ವರ್ಷದೊಳಗಾಗಿ ಶೀತಜ್ವರ, ಕೀಲು- ಸಂದು ರೋಗಾದಿಗಳ ಭಯವು ೨ನೇ ವರ್ಷದಲ್ಲಿ ದುಷ್ಟ ಜಂತುಗಳ ಭಯವು ೫-೭-೧೨ನೇ ವರ್ಷಗಳಲ್ಲಿ ರೋಗ ಭಯವು. ೨೧ನೇ ವರ್ಷದಲ್ಲಿ ಅಪಮೃತ್ಯು ಭಯವು ೬೦ ನೇ ವರ್ಷದಲ್ಲಿ ವಿರೋಧಿಗಳಿಂದ ಕಂಟಕವು ೭೦ನೇ ವಯಸ್ಸಿನಲ್ಲಿ ಶಸ್ತ್ರಭೀತಿಯು ಇದನ್ನು ಕಳೆದರೆ ಈ ಜಾತಕನಿಗೆ 80 ವರ್ಷ ಪರಮಾಯುಷ್ಯವು.
ವಿಶೇಷ ವಿಚಾರ : ಈ ನಕ್ಷತ್ರವು ಮೇಷ (ಟಗರು) ಯೋನಿ, ರಾಕ್ಷಸ ಗಣ,ಅಂತ್ಯನಾಡಿ, ಸಾಧಾರಣ ಸಂಜ್ಞೆ, ಸುಲೋಚನವುಳ್ಳದ್ದಿದ್ದು, ಇದರ ಆರಾಧ್ಯ ವೃಕ್ಷ ಅತ್ತಿ ಮರ. ಇದರ ಸಸಿಯನ್ನು ಹಾಕಿ ಬೆಳೆಸಿದರೆ ಈ ಜಾತಕನ ಕಂಟಕ ದೋಷಾದಿಗಳು ನಿವಾರಣೆಯಾಗುವವು.