ಮನೆ ರಾಜ್ಯ ದಸರಾ ಬೆಳಕಿನ ವೈಭವಕ್ಕೆ ಎಸ್.ಟಿ.ಎಸ್ ಚಾಲನೆ

ದಸರಾ ಬೆಳಕಿನ ವೈಭವಕ್ಕೆ ಎಸ್.ಟಿ.ಎಸ್ ಚಾಲನೆ

0

96 ವೃತ್ತ ಸೇರಿ ಸುಮಾರು 124 ಕಿ.ಮೀ. ಗಳಷ್ಟು ದೂರ ಬೆಳಕಿನ ಚಿತ್ತಾರ

ಮೈಸೂರು(Mysuru): 412ನೇ ದಸರೆಯ ಸಂಭ್ರಮದಲ್ಲಿರುವ ಮೈಸೂರು ಈಗ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು ತನ್ನ ಖ್ಯಾತಿಗೆ ತಕ್ಕಂತೆ ವಿಶ್ವದೆಲ್ಲೆಡೆಯ ಪ್ರವಾಸಿಗರನ್ನು ಸೆಳೆಯಲು ಸಜ್ಜಾಗಿದ್ದು ದಸರಾದ ಪ್ರಮುಖ ಆಕರ್ಷಣೆಯಾದ ವಿದ್ಯುತ್ ದೀಪಾಲಂಕಾರವನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಉದ್ಘಾಟನೆ ಮಾಡಿದರು.

ದಸರೆ ಎಂದರೆ ಬೆಳಕಿನ ಚಿತ್ತಾರ. ಮನಮೋಹಕ ವಿದ್ಯುದಾಲಂಕಾರವೇ ನಾಡಹಬ್ಬದ ಪ್ರಮುಖ ಆಕರ್ಷಣೆ. ದಸರೆ ಎಂದಾಕ್ಷಣ ಮೊದಲು ಕಣ್ಣೆದುರು ಬರುವುದೇ ಮೈಸೂರಿನ ವಿದ್ಯುದಾಲಂಕೃತ ಅರಮನೆ. ಮನಮೋಹಕ ಬೆಳಕಿನ ವೈಭವದಲ್ಲಿ ಅರಮನೆಯನ್ನು ಕಂಡವರಿಗೆ ಈ ದೃಶ್ಯ ವೈಭವ ನೆನಪಿನ ಭಿತ್ತಿಯಲ್ಲಿ ಶಾಶ್ವತವಾಗಿ ಉಳಿದು ಬಿಡುತ್ತದೆ. 412ನೇ ದಸರೆಯ ಸಂಭ್ರಮದಲ್ಲಿರುವ ಮೈಸೂರು ಈಗ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು ತನ್ನ ಖ್ಯಾತಿಗೆ ತಕ್ಕಂತೆ ವಿಶ್ವದೆಲ್ಲೆಡೆಯ ಪ್ರವಾಸಿಗರನ್ನು ಸೆಳೆಯಲು ಸಜ್ಜಾಗಿದೆ.

ನಗರದ ಎಲ್ಲಾ ರಸ್ತೆಗಳು, ಪಾರಂಪರಿಕ ಕಟ್ಟಡಗಳು, ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿವೆ. ಝಗಮಗಿಸುವ ಅರಮನೆ ಸ್ವರ್ಗದ ಬಾಗಿಲು ತೆರೆದು ಸ್ವಾಗತಿಸುವಂತೆ ಕಾಣುತ್ತಿದೆ. ಹಿಂದಿನ ರಾಜ ವೈಭವ ಮತ್ತೆ ಮರುಕಳಿಸಿದಂತೆ ಭಾಸವಾಗುತ್ತದೆ. ನಿತ್ಯದ ಜಂಜಡವನ್ನು ಮರೆಸಿ ಒಂದು ಕ್ಷಣ ಮೈಮನ ಪುಳಕಿತವಾಗುವಂತೆ ಮಾಡುತ್ತಿದೆ. ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಗೆ ಬರುತ್ತಿರುವ ಜನರು ಎಲ್ಲೆಡೆ ಸುತ್ತಾಡಿ ಕಣ್ತುಂಬಿಸಿಕೊಳ್ಳುತ್ತಿದ್ದಾರೆ. ಯುವಜನರು ತಮ್ಮ ದ್ವಿಚಕ್ರ ವಾಹನಗಳಲ್ಲಿ ಸಾಗುತ್ತಾ ಸೆಲ್ಫಿ ಕ್ಲಿಕ್ಕಿಸಿಕೊಂಡು ದಸರೆಯ ಸೊಬಗನ್ನು ಸೆರೆ ಹಿಡಿಯುತ್ತಿದ್ದಾರೆ.

ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಪ್ರಮುಖ ರಸ್ತೆಗಳು, ಝಗಮಗಿಸುವ ಅಂದದ ಅರಮನೆಯ ಮಹಲುಗಳು, ಮಂದ ಬೆಳಕಿನಲ್ಲಿ ಮಂದಸ್ಮಿತವಾಗಿ ಕಾಣುವ ಗುರುಮನೆಗಳು, ಹಸಿರು ದೀಪಾಲಂಕಾರ ಹೊತ್ತ ಉದ್ಯಾನವನಗಳು, ಕಪ್ಪುಬಣ್ಣದ ಭಿತ್ತಿಪತ್ರಗಳ ಮೇಲೆ ಬಣ್ಣಬಣ್ಣದ ಬೆಳಕಿನ ಚಿತ್ತಾರಗಳು ನವರಾತ್ರಿಯ ರಂಗನ್ನು ಹೆಚ್ಚಿಸಿದ್ದು ದೇಶ ವಿದೇಶಗಳ ಪ್ರವಾಸಿಗರೂ ಈಗ ಮೈಸೂರಿನತ್ತ ಮುಖ ಮಾಡಿದ್ದಾರೆ. ಜಂಬೂಸವಾರಿ ಸಾಗುವ ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ವೃತ್ತ, ಹೈವೇ ವೃತ್ತ ಮತ್ತು ಬನ್ನಿಮಂಟಪದ ರಸ್ತೆಗಳು ಮದುವಣಗಿತ್ತಿಯಂತೆ ವಿದ್ಯುತ್ ದೀಪಾಲಂಕಾರದಿಂದ ಕಣ್ಮನ ಸೆಳೆಯುತ್ತಿವೆ. ಅದಲ್ಲದೆ ಅಂಬಾವಿಲಾಸ ಅರಮನೆ, ಲಲಿತ ಮಹಲ್, ಅರಮನೆ ದೇವರಾಜು ಅರಸು ರಸ್ತೆ, ಮೂಡಾ ರಸ್ತೆ, ಎಲ್ಲೈಸಿ ಸರ್ಕಲ್, ರಾಮ ಸ್ವಾಮಿ ಸರ್ಕಲ್, ರೈಲ್ವೆ ಸ್ಟೇಷನ್ ವೃತ್ತ, ಪಾರಂಪರಿಕ ಕಟ್ಟಡಗಳಾದ ಪುರಭವನ, ನಗರ ಪಾಲಿಕೆ ಕಟ್ಟಡ, ಮೂಡಾ, ನ್ಯಾಯಾಲಯ ಕಟ್ಟಡ, ಜಿಲ್ಲಾಧಿಕಾರಿ ಕಚೇರಿ, ಮೈಸೂರು ವಿವಿ ಸೇರಿದಂತೆ ಪ್ರಮುಖ ಪಾರಂಪರಿಕ ಕಟ್ಟಡಗಳಲ್ಲೂ ಬೆಳಕಿನ ಝಳ ತುಂಬಿದೆ.

ಗಾಂಧೀಜಿ, ಅಂಬೇಡ್ಕರ್ ಸೇರಿದಂತೆ ರಾಷ್ಟ್ರ ನಾಯಕರು, ವಿವೇಕಾನಂದ, ಬಸವಣ್ಣ ಸೇರಿದಂತೆ ಸಮಾಜ ಸುಧಾರಕರ ನಾನಾ ರೀತಿ ಚಿತ್ತಾರಗಳು ಈ ಮಹನೀಯರ ಸಂದೇಶ ಸಾರುತ್ತಿವೆ. ದಸರಾ ದೀಪಾಲಂಕಾರ ಉಪಸಮಿತಿ ಈ ಬಾರಿ 96 ವೃತ್ತಗಳು ಸೇರಿದಂತೆ ಸುಮಾರು 124 ಕಿ.ಮೀ. ಗಳಷ್ಟು ದೂರ ಬೆಳಕಿನ ಚಿತ್ತಾರ ಮೂಡಿಸಿದ್ದು ಸಂಜೆ ಏಳು ಗಂಟೆಯಿಂದ ರಾತ್ರಿ 11 ರ ವರೆಗೂ ಈ ಬೆಳಕಿನ ವೈಭವ ಕಣ್ತುಂಬಿ ಕೊಳ್ಳಬಹುದು.

ಇಂಧನ ಸಚಿವರಾದ ಸುನೀಲ್ ಕುಮಾರ್, ಶಾಸಕರಾದ ನಾಗೇಂದ್ರ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಬಿಜೆಪಿ ನಗರ ಜಿಲ್ಲಾಧ್ಯಕ್ಷರಾದ ಶ್ರೀವತ್ಸ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಹಿಂದಿನ ಲೇಖನಸಚಿವ ಎಸ್.ಟಿ.ಸೋಮಶೇಖರ್ ಅವರಿಂದ ದಸರಾ ವಸ್ತು ಪ್ರದರ್ಶನ ಉದ್ಘಾಟನೆ
ಮುಂದಿನ ಲೇಖನಶರಣು ಶರಣಯ್ಯ ಶರಣು ಬೆನಕ