ಬೆಂಗಳೂರು: ಬಹುಕೋಟಿ ಬಿಟ್ ಕಾಯಿನ್ ಹಗರಣ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ಸೋಮವಾರ ಡಿವೈಎಸ್‌ಪಿ ಶ್ರೀಧರ್ ಪೂಜಾರ್ ಅವರನ್ನು ಬಂಧಿಸಿದೆ.
ಡಿವೈಎಸ್‌ಪಿ ಶ್ರೀಧರ್ ಪೂಜಾರ್ ಅವರು ಈ ಹಿಂದೆ ಸಿಸಿಬಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಬಿಟ್ ಕಾಯಿನ್ ಪ್ರಕರಣದ ತನಿಖೆ ನಡೆಸಿದ್ದರು. ಆ ವೇಳೆ ಇವರು ಪ್ರಕರಣದಲ್ಲಿ ಸಾಕ್ಷ್ಯ ತಿರುಚಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇತ್ತ ಬಿಟ್‌ಕಾಯಿನ್ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್‌ಐಟಿ ತಂಡವು ಸೋಮವಾರ ವಿಚಾರಣೆಗಾಗಿ ಶ್ರೀಧರ್ ಪೂಜಾರ್ ಅವರನ್ನು ಸಿಐಡಿಯಲ್ಲಿರುವ ತಮ್ಮ ಕಚೇರಿಗೆ ಬರುವಂತೆ ಸೂಚಿಸಿತ್ತು.
ವಿಚಾರಣೆ ವೇಳೆ ಗೊಂದಲದ ಹೇಳಿಕೆ ನೀಡಿರುವ ಶ್ರೀಧರ್ ಪೂಜಾರ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ನಂತರ 1ನೇ ಎಸಿಎಂಎಂ ಕೋರ್ಟ್‌ಗೆ ಹಾಜರಿಪಡಿಸಿ 5 ದಿನಗಳ ಕಾಲ ವಶಕ್ಕೆ ನೀಡುವಂತೆ ಎಸ್‌ಐಟಿ ಮನವಿ ಮಾಡಿತ್ತು. ಮನವಿ ಪುರಸ್ಕರಿಸಿದ ನ್ಯಾಯಾಲಯವು 3 ದಿನಗಳ ಕಾಲ ಶ್ರೀಧರ್ ಪೂಜಾರ್ ಅವರನ್ನು ವಶಕ್ಕೆ ನೀಡಿದೆ. ಇದರ ಬೆನ್ನಲ್ಲೇ ಶ್ರೀಧರ್ ಪೂಜಾರ್‌ಗೆ ಸಿಐಡಿ ಕಚೇರಿಯಲ್ಲಿ ಡ್ರಿಲ್ ನಡೆಸಿ ಮಾಹಿತಿ ಕಲೆ ಹಾಕಲಾಗುತ್ತಿದೆ.
ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಶ್ರೀಧರ್ ಪೂಜಾರ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಹಿಂದೆ ಶ್ರೀಧರ್ ಪೂಜಾರ್ ಅವರು ಬಿಟ್‌ಕಾಯಿನ್ ಹಗರಣದ ಪ್ರಮುಖ ಆರೋಪಿಯಾಗಿದ್ದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ವಿಚಾರಣೆ ನಡೆಸಿದ್ದರು. ಇನ್ನು ಎಸ್‌ಐಟಿ ಅಧಿಕಾರಿಗಳು ಶ್ರೀಕಿಯನ್ನು ವಿಚಾರಣೆ ನಡೆಸಿದಾಗ ಸಿಸಿಬಿ ಪೊಲೀಸರ ತನಿಖೆಯಲ್ಲಿ ಲೋಪ ನಡೆದಿರುವುದು ಕಂಡು ಬಂದಿತ್ತು.
ಈ ಹಿಂದೆ ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆಯೇ ಶ್ರೀಧರ್ ಅವರು ತಲೆಮರೆಸಿಕೊಂಡಿದ್ದರು. ಫೆಬ್ರುವರಿ 27ರಂದು ನಗರದ ಸೆಂಟ್ರಲ್ ಕಾಲೇಜು ಬಳಿ ಶ್ರೀಧರ್ ಅವರಿದ್ದ ಮಾಹಿತಿ ಪಡೆದಿದ್ದ ತನಿಖಾಧಿಕಾರಿಗಳು ಬಂಧನಕ್ಕೆ ತೆರಳಿದ್ದರು. ಮೆಟ್ರೋ ನಿಲ್ದಾಣ ಬಳಿ ವಕೀಲರ ಜತೆಗೆ ಕಾರಿನಲ್ಲಿದ್ದ ಶ್ರೀಧರ್ ತನಿಖಾಧಿಕಾರಿಗಳನ್ನು ಕಂಡ ತಕ್ಷಣ ತಪ್ಪಿಸಿಕೊಂಡು ಪರಾರಿಯಾಗಲು ಮುಂದಾಗಿದ್ದರು. ಅವರನ್ನು ಹಿಡಿಯಲು ಮುಂದಾದಾಗ ಎಸ್‌ಐಟಿ ಅಧಿಕಾರಿಗಳ ಮೇಲೆಯೇ ಕಾರು ಹತ್ತಿಸಿ ಪರಾರಿ ಆಗಿದ್ದರು. ಘಟನೆಯಲ್ಲಿ ಓರ್ವ ಪೊಲೀಸರು ಗಾಯಗೊಂಡಿದ್ದರು. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.