ಬರ್ಲಿನ್ : ಜರ್ಮನಿ ಪ್ರವಾಸದಲ್ಲಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಭಾರತದಲ್ಲಿ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಬಿಜೆಪಿ ದಾಳಿ ನಡೆಸುತ್ತಿದೆ ಎಂದು ದೂರಿದ್ದಾರೆ. ಬರ್ಲಿನ್ನಲ್ಲಿರುವ ಹರ್ಟೀ ಶಾಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳಾದ ಇಡಿ, ಸಿಬಿಐಗಳನ್ನು ಪ್ರತಿಪಕ್ಷಗಳನ್ನು ಹಳಿಯುವ ರಾಜಕೀಯ ಸಾಧನವಾಗಿ ಪರಿವರ್ತಿಸಿದೆ. ಇದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ದಾಳಿ ಎಂದು ಕರೆದಿದ್ದಾರೆ.
ವಾಸ್ತವಿಕವಾಗಿ ಬಿಜೆಪಿ ವಿರುದ್ಧ ಯಾವುದೇ ಪ್ರಕರಣಗಳಿಲ್ಲ. ಆದರೆ ಹೆಚ್ಚಿನ ರಾಜಕೀಯ ಪ್ರಕರಣಗಳು ಆಡಳಿತ ಪಕ್ಷವನ್ನು ವಿರೋಧಿಸುವವರನ್ನು ಗುರಿಯಾಗಿಸಿಕೊಂಡಿವೆ. ಕಾಂಗ್ರೆಸ್ ಅನ್ನು ಬೆಂಬಲಿಸುವ ಉದ್ಯಮಿಗಳು ಬೆದರಿಕೆಯನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು. ಇಂಡಿಯಾ ಒಕ್ಕೂಟದ ಪಕ್ಷಗಳು ರಾಜ್ಯ ಮತ್ತು ಸ್ಥಳೀಯ ಚುನಾವಣೆಯಲ್ಲಿ ಪರಸ್ಪರ ಸ್ಪರ್ಧಿಸುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ, ಇದು ಯುದ್ಧತಂತ್ರದ ಸ್ಪರ್ಧೆಗಳು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಿದ್ಧಾಂತಕ್ಕೆ ವಿರೋಧವಾಗಿ ಮೈತ್ರಿಕೂಟವು ಒಗ್ಗಟ್ಟಾಗಿ ಉಳಿದಿದೆ ಎಂದು ಅವರು ಹೇಳಿದರು.
ಒಬ್ಬ ವ್ಯಕ್ತಿಯ ಇಚ್ಛೆಗೆ ಅನುಗುಣವಾಗಿ ಭಾರತವನ್ನು ಮುನ್ನಡೆಸಲು ಸಾಧ್ಯವಿಲ್ಲ ಎಂದು ನಂಬುವ ಲಕ್ಷಾಂತರ ಜನರಿದ್ದಾರೆ. ರಾಜ್ಯ ರಾಜ್ಯಗಳ ನಡುವಿನ ಸಂವಾದದ ಮೂಲಕ ದೇಶ ಕಾರ್ಯನಿರ್ವಹಿಸುವ ಮಾದರಿಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಭಾರತದಲ್ಲಿ ಉತ್ಪಾದನೆ ಹೆಚ್ಚಳ ಮಾಡಿದರೆ ಉದ್ಯೋಗ ಹೆಚ್ಚಿಸಬಹುದು. ಆದರೆ ಬಿಜೆಪಿ ಅದಾನಿ, ಅಂಬಾನಿಗಳ ಕೈಗೆ ಅಧಿಕಾರ ನೀಡಿದೆ. ಭಾರತದಲ್ಲಿ ಹೆಚ್ಚಿನವರು ಚೀನೀ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ.ಈಗ ಇರುವ ಜಿಎಸ್ಟಿ ಸಂಪೂರ್ಣ ಉತ್ಪಾದಕ ಮತ್ತು ಗ್ರಾಹಕ ವಿರೋಧಿಯಾಗಿದೆ ಎಂದು ಟೀಕಿಸಿದರು.














