ನವದೆಹಲಿ(New delhi): ದೆಹಲಿ ಭೇಟಿ ಫಲಪ್ರದವಾಗಿದೆ, ಬಿಜೆಪಿ ವರಿಷ್ಠ ಜೆ ಪಿ ನಡ್ಡ(J.P.Nadda) ಅವರನ್ನು ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ವಿಸ್ತೃತವಾಗಿ ಚರ್ಚೆ ಮಾಡಿದ್ದೇವೆ. ರಾಜ್ಯದ ರಾಜಕಾರಣ ಮತ್ತು ಸಂಪುಟ ರಚನೆ ಬಗ್ಗೆ ಸಂಪೂರ್ಣ ಚರ್ಚೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraja Bommai) ತಿಳಿಸಿದ್ದಾರೆ.
ದೆಹಲಿಯಿಂದ ಬೆಂಗಳೂರಿಗೆ ಆಗಮಿಸುವ ಮುನ್ನ ಕರ್ನಾಟಕ ಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ತಿಂಗಳ 16 ಮತ್ತು 17ರಂದು ನಡೆಯುವ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸಭೆ ಬಗ್ಗೆ ಸಂಪೂರ್ಣ ಚರ್ಚೆಯಾಗಿದೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ ಸೇರಿದಂತೆ ಮುಂಬರುವ ಚುನಾವಣೆಗಳಿಗೆ ಯಾವ ರೀತಿ ಸಿದ್ದತೆ ಮಾಡಿಕೊಳ್ಳಬೇಕೆಂದು ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಚರ್ಚೆಯಾಗಲಿದೆ ಎಂದರು.
ಜೆ ಪಿ ನಡ್ಡಾ ಅವರು ಹಲವು ಸೂಚನೆಗಳನ್ನು ನೀಡಿದ್ದಾರೆ. ಸಂಪುಟ ರಚನೆ ಬಗ್ಗೆ ಕೂಡ ಸ್ಥೂಲವಾಗಿ ಚರ್ಚೆಗಳು ಆಗಿವೆ. ಮಾಹಿತಿಯನ್ನು ಅವರು ಪಡೆದುಕೊಂಡಿದ್ದಾರೆ. ಬಿಜೆಪಿ ವರಿಷ್ಠರು ಕೂಡ ಎಲ್ಲಾ ಮಾಹಿತಿ ಪಡೆದಿದ್ದಾರೆ, ಸಂಪುಟ ರಚನೆ ಬಗ್ಗೆ ಇನ್ನೂ ದಿನಾಂಕ ನಿರ್ಧಾರವಾಗಿಲ್ಲ ಎಂದರು.
ರಾಜ್ಯದ ಅಭಿವೃದ್ಧಿ ವಿಚಾರಗಳ ಕುರಿತು ಚರ್ಚಿಸಲು ದೆಹಲಿಗೆ ಈ ಬಾರಿ ನಾನು ಬಂದಿದ್ದು ಅಮಿತ್ ಶಾ ಅವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಈ ಬಾರಿಯ ದೆಹಲಿ ಭೇಟಿ ಬಹಳ ಫಲಪ್ರದವಾಗಿದೆ. ಜಲಶಕ್ತಿ, ವಿದ್ಯುತ್, ಪರಿಸರ ಖಾತೆ ಸಚಿವರನ್ನು ಭೇಟಿ ಮಾಡಿದ್ದೇನೆ. ಹಣಕಾಸು ಸಚಿವೆ ಮತ್ತು ರಕ್ಷಣಾ ಸಚಿವರನ್ನು ಕೂಡ ಭೇಟಿ ಮಾಡಿ ಚರ್ಚಿಸಿದ್ದೇನೆ ಎಂದು ವಿವರಿಸಿದರು.ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.