ಬೆಂಗಳೂರು: ಲೋಕಸಭಾ ಚುನಾವಣೆಗೆ ಅಖಾಡ ಸಜ್ಜಾಗಿದೆ. ಅಭ್ಯರ್ಥಿಗಳು ತಮ್ಮ ಗೆಲುವಿಗಾಗಿ ತಯಾರಿ ಆರಂಭಿಸಿದ್ದಾರೆ.
ಇದರ ಬೆನ್ನಲ್ಲೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಡುವಂತೆ ಮಾಡಲು ಬಿಜೆಪಿ ತಲಾ 50 ಕೋಟಿ ರೂಪಾಯಿ ನೀಡುವುದಾಗಿ ಆಮಿಷವೊಡ್ಡಿದೆ ಎಂದು ಆರೋಪಿಸಿದ್ದಾರೆ.
ಆದಾಯ ತೆರಿಗೆ ಇಲಾಖೆ ದಾಳಿ ನಡೆಸುತ್ತದೆ. ಅಕ್ರಮದ ಮೂಲಕ ಸಂಪತ್ತು ಗಳಿಸಿದ ಶ್ರೀಮಂತರು ವಿರೋಧ ಪಕ್ಷಗಳಲ್ಲಿ ಮಾತ್ರ ಇದ್ದಾರೆಯೇ? ಬಿಜೆಪಿಯಲ್ಲಿ ಯಾರೂ ಇಲ್ಲವೇ? ಬಿಜೆಪಿ ಅವರೇ ಭ್ರಷ್ಟಾಚಾರದ ಮೂಲ ಪಿತಾಮಹರು ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಇಂದಿಗೂ ಅವರು ಆಪರೇಷನ್ ಕಮಲಕ್ಕೆ ಪ್ರಯತ್ನಿಸುತ್ತಿದ್ದಾರೆ. ನಮ್ಮ ಶಾಸಕರಿಗೆ ರಾಜೀನಾಮೆ ನೀಡುವಂತೆ 50 ಕೋಟಿ ರೂ. ಆಮಿಷವೊಡ್ಡತ್ತಿದ್ದಾರೆ. ನಿಮ್ಮ ಚುನಾವಣಾ ವೆಚ್ಚಕ್ಕೂ ಹಣ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ಅವರು ಯಾವ ಹಣದ ಭರವಸೆ ನೀಡುತ್ತಿದ್ದಾರೆ? ಅದು ಕಪ್ಪು ಹಣ ಅಲ್ಲವೇ? ಅದು ಭ್ರಷ್ಟಾಚಾರದ ಹಣವಲ್ಲವೇ? ಎಂದು ಸಿಎಂ ಕೆಂಡಕಾರಿದರು.