ಬೆಂಗಳೂರು: ಮುಡಾ ಪ್ರಕರಣ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರಕ್ಕೆ ಕಳಂಕ ತರಲು ಹೊರಟಿರುವ ಬಿಜೆಪಿ-ಜೆಡಿಎಸ್ ಗೆ ತಕ್ಕ ಪ್ರತ್ಯುತ್ತರ ನೀಡಲಾಗುವುದು. ಯಾರು ಯಾರು ಎಷ್ಟು ನಿವೇಶನ, ಎಲ್ಲೆಲ್ಲಿ ಪಡೆದಿದ್ದಾರೆ ಎನ್ನುವ ವಾಸ್ತವ ಬಿಚ್ಚಿಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಬಿಜೆಪಿ ಬೆಂಗಳೂರಿನಿಂದ ಮೈಸೂರಿಗೆ ಹಮ್ಮಿಕೊಂಡಿರುವ ಪಾದಯಾತ್ರೆ ಮೂಲಕ ಅವರು ತೋಡಿಕೊಂಡ ಭಾವಿಗೆ ಅವರೇ ಬೀಳುತ್ತಿದ್ದಾರೆ ಎಂದರು.
ಪಾದಯಾತ್ರೆ ಪರಿಕಲ್ಪನೆ ಮಹಾತ್ಮಾ ಗಾಂಧಿ ಅವರ ಕೊಡುಗೆ. ಕಾಂಗ್ರೆಸ್ ಅಧ್ಯಕ್ಷರಾಗಿ ಅವರು ನೀಡಿದ ಕೊಡುಗೆಯನ್ನು ಕಾಂಗ್ರೆಸ್ ಯಶಸ್ವಿಯಾಗಿ ನಿರ್ವಹಿಸಿದೆ. ಈಚೆಗೆ ನಡೆದ ಭಾರತ್ ಜೋಡೋ ನ್ಯಾಯ ಯಾತ್ರೆ ಒಂದು ಉದಾಹರಣೆ. ಬಿಜೆಪಿ ಯಾತ್ರೆಗಳನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಂಡಿದೆ ಎಂದು ಹೇಳಿದರು.
ಮಹಾತ್ಮಾ ಗಾಂಧಿ ಎಐಸಿಸಿ ಅಧ್ಯಕ್ಷತೆ ವಹಿಸಿದ ಬೆಳಗಾವಿ ಅಧಿವೇಶನಕ್ಕೆ 100 ವರ್ಷ ತುಂಬಿದೆ. ಹಾಗಾಗಿ ರಾಜ್ಯದ ಹಲವೆಡೆ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.