ಬೆಳಗಾವಿ: ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ಮೇಲೆ ಚಾಕು ಇರಿತ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ, ಅವರ ಇಬ್ಬರು ಆಪ್ತರು ಹಾಗೂ ಇಬ್ಬರು ಗನ್ ಮ್ಯಾನ್ ಗಳ ವಿರುದ್ಧ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಐಪಿಸಿ ಸೆಕ್ಷನ್ 1860 (U/s 143, 147, 148, 323, 324, 379, 504, 506), ಅಟ್ರಾಸಿಟಿ ಕೇಸ್, ಐಪಿಸಿ ಸೆಕ್ಷನ್ 1989 (u/s-3(1), (r)(s), 3(2)(v-a), IPC 1860(u/s-149 ರಡಿ ಪ್ರಕರಣ ದಾಖಲಿಸಲಾಗಿದೆ.
ಎಂಎಲ್ ಸಿ ಚನ್ನರಾಜ ಹಟ್ಟಿಹೊಳಿ, ಆಪ್ತ ಸುಜಿತ್ ಜಾಧವ್, ಸದ್ದಾಂ, ಚನ್ನರಾಜ ಹಟ್ಟಿಹೊಳಿಯ ಇಬ್ಬರು ಗನ್ ಮ್ಯಾನ್ ಗಳ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಪೃಥ್ವಿ ಸಿಂಗ್ ಪುತ್ರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಲಾಗಿದೆ.
ಪೃಥ್ವಿ ಸಿಂಗ್ ಮೇಲೆ ಸೋಮವಾರ ಚಾಕುವಿನಿಂದ ಇರಿಯಲಾಗಿತ್ತು. ಅದಾದ 18 ಗಂಟೆಗಳ ಬಳಿಕ, ಅಂದರೆ ಮಂಗಳವಾರ ಮಧ್ಯಾಹ್ನ ಆರೋಪಿಗಳ ವಿರುದ್ಧ ಪೃಥ್ವಿ ಸಿಂಗ್ ಪುತ್ರ ಎಪಿಎಂಸಿ ಠಾಣೆಗೆ ದೂರು ನೀಡಿದ್ದಾರೆ.
ಘಟನೆ ವಿವರ:
ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯರೂ ಆಗಿರುವ ಶಾಸಕ ರಮೇಶ್ ಜಾರಕಿಹೊಳಿ ಅತ್ಯಾಪ್ತ ಪೃಥ್ವಿ ಸಿಂಗ್ ಮೇಲೆ ಸೋಮವಾರ ಸಂಜೆ ಬೆಳಗಾವಿ ಜಿಲ್ಲೆಯ ಜಯನಗರದಲ್ಲಿ ಎಂಎಲ್ ಸಿ ಚನ್ನರಾಜ ಹಟ್ಟಿಹೊಳಿ ಆಪ್ತರು ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದರು. ಪೃಥ್ವಿ ಸಿಂಗ್ ಅವರ ಕೈ ಹಾಗೂ ಬೆನ್ನಿಗೆ ಗಾಯಗಳಾಗಿದ್ದು, ಅವರನ್ನು ಬಳಿಕ ಬೆಳಗಾವಿಯ ಕೆಎಲ್ ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು.