ಮನೆ ಕಾನೂನು ಒತ್ತುವರಿಯಿಂದ ಕೆರೆ ಮತ್ತು ಖರಾಬು ಜಾಗದ ರಕ್ಷಣೆ ಸರ್ಕಾರದ ಹೊಣೆ: ಹೈಕೋರ್ಟ್‌

ಒತ್ತುವರಿಯಿಂದ ಕೆರೆ ಮತ್ತು ಖರಾಬು ಜಾಗದ ರಕ್ಷಣೆ ಸರ್ಕಾರದ ಹೊಣೆ: ಹೈಕೋರ್ಟ್‌

0

ದಾವಣಗೆರೆ ಜಗಳೂರು ತಾಲ್ಲೂಕಿನ ತಾಯಿಟೋಣಿ ಗ್ರಾಮದ ಸರ್ಕಾರಿ ಕೆರೆ ಮತ್ತು ಖರಾಬು ಜಮೀನಿಗೆ ಸೇರಿದ ಸುಮಾರು 28 ಎಕರೆ ಜಾಗವನ್ನು ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೋಮವಾರ ನೋಟಿಸ್‌ ಜಾರಿಗೊಳಿಸಿದೆ.

ಸರ್ಕಾರಿ ಜಾಗದ ಒತ್ತುವರಿ ತೆರವುಗೊಳಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಎಂ ಟಿ ಬಾಬು ಸೇರಿದಂತೆ ತಾಯಿಟೋಣಿ ಗ್ರಾಮದ 10 ಮಂದಿ ನಿವಾಸಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠವು ಪ್ರತಿವಾದಿಗಳಾದ ರಾಜ್ಯ ಕಂದಾಯ ಇಲಾಖೆ ಕಾರ್ಯದರ್ಶಿ, ಸಣ್ಣ ನೀರಾವರಿ ಇಲಾಖೆ ಪ್ರಧಾನ ಕಾರ್ಯದರ್ಶಿ, ದಾವಣಗೆರೆ ನಗರ ಕಾರ್ಯಕಾರಿ ಎಂಜಿನಿಯರ್‌, ಜಿಲ್ಲಾಧಿಕಾರಿ, ಉಪ ವಲಯದ ಉಪ ವಿಭಾಗಾಧಿಕಾರಿ ಮತ್ತು ಒತ್ತುವರಿದಾರರು ಎನ್ನಲಾದ ಹನುಮಂತ ರೆಡ್ಡಿ, ಬಾಬುರೆಡ್ಡಿ, ರಾಜಶೇಖರ ರೆಡ್ಡಿ ಮತ್ತು ಪ್ರಹ್ಲಾದ್ ರೆಡ್ಡಿ ಅವರಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಎ ನಾಗರಾಜಪ್ಪ ಅವರು, ತಾಯಿಟೋಣಿ ಗ್ರಾಮದ ಸರ್ಕಾರಿ ಕೆರೆಗೆ ಸೇರಿದ ಸರ್ವೇ ನಂ.6ರಲ್ಲಿನ 10 ಎಕರೆ 21 ಗುಂಟೆ, ಸರ್ವೇ ನಂಬರ್‌ 27ರಲ್ಲಿನ 6 ಎಕರೆ ಮತ್ತು ಗ್ರಾಮದ 12 ಎಕರೆ 32 ಗುಂಟೆ ಖರಾಬು (ಬಂಜರು) ಜಮೀನನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದಾರೆ. ಜೊತೆಗೆ, ಕೃಷಿ ಮತ್ತು ಪಶುಸಂಗೋಪನೆ ಚಟುವಟಿಕೆಗೆ ಗ್ರಾಮಸ್ಥರು ಸರ್ಕಾರಿ ಕೆರೆಯನ್ನು ಆಧರಿಸಿದ್ದಾರೆ. ಈ ಜಾಗದ ಸಂರಕ್ಷಣೆ ಕೋರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಒತ್ತುವರಿ ತೆರವುಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು.

ಈ ವಾದವನ್ನು ಗಂಭೀರವಾಗಿ ಪರಿಗಣಿಸಿದ ಪೀಠವು ಸರ್ಕಾರದ ಜಾಗದ ಒತ್ತುವರಿಯನ್ನು ಒಪ್ಪಲಾಗದು. ಕೆರೆ ಮತ್ತು ಖರಾಬು ಜಮೀನನ್ನು ಸಂರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟಿತು.

ಹಿಂದಿನ ಲೇಖನಒಂದೇ ಗಿಡದಲ್ಲಿ ಸುಮಾರು ೫೦೦ ಬಾಳೆ ಹಣ್ಣು ಬೆಳೆದ ಮಾದರಿ ರೈತ
ಮುಂದಿನ ಲೇಖನಬಿಜೆಪಿ ಮುಖಂಡ ಪೃಥ್ವಿ ಸಿಂಗ್ ​ಗೆ ಚಾಕು ಇರಿತ: ಕಾಂಗ್ರೆಸ್ ಎಂಎಲ್‌ಸಿ ಸೇರಿ ಐವರ ವಿರುದ್ಧ ಎಫ್ ​ಐಆರ್