ಬೆಳಗಾವಿ : ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬೆಳಗಾವಿಯಲ್ಲಿ ಬಿಜೆಪಿ ನಾಯಕರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸುವರ್ಣಸೌಧ ಕಡೆ ರೈತ ಮುಖಂಡರು ಮತ್ತು ಬಿಜೆಪಿ ನಾಯಕರು, ಕಾರ್ಯಕರ್ತರು ಪಾದಯಾತ್ರೆ ಹೊರಟರು. ಪ್ರತಿಭಟನೆ ಸ್ಥಳದಿಂದ ಹೈವೇವರೆಗೂ ಪಾದಯಾತ್ರೆ ಬಂದ ಬಿಜೆಪಿ ನಾಯಕರು, ರೈತರು ಬೆಳಗಾವಿ ಸರ್ವಿದ್ ರಸ್ತೆ ಮೇಲೆಯೇ ಸಾಗಿದರು. ಹಲಗಾ ಮಾರ್ಗವಾಗಿ ಸೌಧ ಬಳಿ ಹೊರಟ ಮೆರವಣಿಗೆಯನ್ನು ಪೊಲೀಸರು ತಡೆದರು. ಬಿಜೆಪಿ ಪಾದಯಾತ್ರೆಗೆ ನಿರ್ಬಂಧ ವಿಧಿಸಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.
ಇದಕ್ಕೂ ಮೊದಲು ಬೆಳಗಾವಿ ಮಾಲಿನಿ ಗ್ರೌಂಡ್‌ನಲ್ಲಿ ಬಿಜೆಪಿ ನೇತೃತ್ವದಲ್ಲಿ ರೈತರ ಬೃಹತ್ ಪ್ರತಿಭಟನೆ ನಡೆಸಿದರು. ಪ್ಲೆಕಾರ್ಡ್‌ಗಳನ್ನು ಹಿಡಿದು ವೇದಿಕೆ ಮೇಲೆ ನಾಯಕರು, ರೈತ ಪ್ರಮುಖರು ಇದ್ದರು. ರೈತರ ಹೋರಾಟದಲ್ಲಿ ಬಿಜೆಪಿ ನಾಯಕರು ವೇದಿಕೆ ಹಂಚಿಕೊಂಡರು.
ಬಿಜೆಪಿ ಮತ್ತು ರೈತರ ಪ್ರತಿಭಟನೆಯಲ್ಲಿ ಪ್ರತ್ಯೇಕ ರಾಜ್ಯದ ಕೂಗು ಕೇಳಿಬಂದಿತು. ರೈತರ ಸಮಸ್ಯೆಗಳನ್ನು ಸರ್ಕಾರ ಬಗೆಹರಿಸುವ ಕೆಲಸ ಮಾಡಬೇಕು, ಸರ್ಕಾರ ರೈತರ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ನಾವು ಬಿಡಲ್ಲ. ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕು, ಎರಡು ಜಿಲ್ಲೆ ಆಗಬೇಕು, ಚಿಕ್ಕೋಡಿ ಮತ್ತು ಗೋಕಾಕ್ ಜಿಲ್ಲೆಗಳಾಗಿ ವಿಭಜನೆ ಮಾಡಿ ಎಂದರು.
ಬೆಳಗಾವಿ ಜಿಲ್ಲೆ ವಿಭಜನೆ ಮಾಡದಿದ್ದಲ್ಲಿ ಉ.ಕ ಭಾಗಕ್ಕೆ ಮಲತಾಯಿ ಧೋರಣೆ ಮುಂದುವರೆಸಿದರೆ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬೇಡಿಕೆ ತೀವ್ರಗೊಳಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಪ್ರತ್ಯೇಕ ಉ.ಕ ರಾಜ್ಯದ ಬೇಡಿಕೆಯನ್ನು ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಪ್ರಸ್ತಾಪಿಸಿದರು. ಎಂಎಲ್‌ಸಿ ರವಿಕುಮಾರ್ ಮಾತನಾಡಿ, ಈ ಸರ್ಕಾರ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆದಿಲ್ಲ. ಶಾಸಕರ ಖರೀದಿ ಕೇಂದ್ರ ತೆರೆದಿದೆ. ಸಿದ್ದರಾಮಯ್ಯ ನಾಟಿ ಕೋಳಿ ತಿನ್ನೋದ್ರಲ್ಲಿ ಬ್ಯುಸಿ. ಇಡೀ ಸರ್ಕಾರ ಕಚ್ಚಾಟದಲ್ಲಿ ಮುಳುಗಿದೆ ಎಂದು ವಾಗ್ದಾಳಿ ನಡೆಸಿದರು.
ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯಿಸಿ, ಕಾಂಗ್ರೆಸ್‌ನವರಿಗೆ ಒಂದು ವರ್ಷದಿಂದ ಪುನಾರಚನೆ ಮಾಡೋಕೆ ಯೋಗ್ಯತೆ ಇಲ್ಲ. ಅದೇ ಚರ್ಚೆ ಮಾಡಿಕೊಂಡು ಆಡಳಿತ ಮರೆತಿದ್ದಾರೆ. ಅಧಿಕಾರ ಹಸ್ತಾಂತರ ಬೇಗ ಮಾಡಿಕೊಂಡು ಅಭಿವೃದ್ಧಿ ಕಡೆ ಗಮನ ಕೊಡಿ. ಕೇಂದ್ರದ ವಿರುದ್ಧ ಆರೋಪ ಬಿಡಿ, ಲವ್ ಲೆಟರ್ ಬರೆಯೋದು ಬಿಡಿ. ಕೇಂದ್ರದ ಜತೆ ಮಾತಾಡಿ ಏನು ಬೇಕೋ ಅದನ್ನು ತಗೊಂಡ್ ಬನ್ನಿ, ಇಲ್ಲಾಂದ್ರೆ ರಾಜೀನಾಮೆ ಕೊಟ್ಟು ಹೋಗಿ ಎಂದು ಗುಡುಗಿದರು.
ಸಿ.ಟಿ.ರವಿ ಮಾತನಾಡಿ, ಈ ಸರ್ಕಾರ ಕಣ್ಣು ಇದ್ದು ಕುರುಡು, ಕಿವಿ ಇದ್ದು ಕಿವುಡು. ಇಂಥ ಸರ್ಕಾರಕ್ಕೆ ಎಚ್ಚರಿಸಲು ನಾವು ಸುವರ್ಣಸೌಧ ಮುತ್ತಿಗೆ ಹಾಕ್ತೇವೆ. ಬೇರೆ ರಾಜ್ಯಗಳಲ್ಲಿ ಟನ್ ಕಬ್ಬಿಗೆ 3,300 ರೂ. ಕೊಡ್ತಿದ್ದಾರೆ. ನಿಮಗೇನಾಗಿದೆ? ಈ ಸರ್ಕಾರ ರೈತರ ಪಾಲಿಗೆ ಸತ್ತಿದೆ. ಸಕ್ಕರೆ ಕಾರ್ಖಾನೆ ಮಾಲೀಕರಿಗಾಗಿ ಈ ಸರ್ಕಾರ ಬದುಕಿದೆ. ಮೆಕ್ಕೆಜೋಳಕ್ಕೆ ಕೇಂದ್ರ ಎಮ್‌ಎಸ್‌ಪಿ ನಿಗದಿ ಮಾಡಿದ್ರೂ ಖರೀದಿ ಕೇಂದ್ರ ಯಾಕೆ ತೆರೆದಿಲ್ಲ? ನಾವು ನಿಮ್ಮ ಕುರ್ಚಿ ಕಚ್ಚಾಟ ನೋಡಲು ಬಂದಿಲ್ಲ. ಕಿತ್ತಾಟ ನಿಲ್ಲಿಸಿ, ರೈತರ ಸಮಸ್ಯೆ ಬಗೆಹರಿಸಿ ಎಂದು ಒತ್ತಾಯಿಸಿದರು.
ಅಶೋಕ್ ಭಾಷಣೆ ಮಾಡಿ, ರೈತರು ಆತ್ಮಹತ್ಯೆ ಮಾಡ್ಕೊಳ್ತಿದ್ದಾರೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ರೆ ಯಾಕೆ ಆತ್ಮಹತ್ಯೆ ಮಾಡ್ಕೊಳ್ತಿದ್ದಾರೆ, ರೈತರ ಸಮಸ್ಯೆ ಏನು ಅಂತ ಸರ್ಕಾರ ಕೇಳಿಲ್ಲ. ಈ ಸರ್ಕಾರ ಬದುಕಿಲ್ಲ. ಮೆಕ್ಕೆಜೋಳ ಖರೀದಿ ಮಿತಿ ಈಗ ಜಾಸ್ತಿ ಮಾಡಿದ್ರು. ಇಷ್ಟು ದಿನ ಮಣ್ಣು ತಿಂತಿದ್ರಾ? ಬಿಜೆಪಿಯವರಿಗೆ ಹೋರಾಟ ಮಾಡೋಕ್ಕೆ ನೈತಿಕತೆ ಇದೆಯಾ ಎಂದು ಪ್ರಶ್ನಿಸಿದರು.
ವಿಜಯೇಂದ್ರ ಮಾತನಾಡಿ, ರಾಜ್ಯದಲ್ಲಿ ಲಜ್ಜೆಗೆಟ್ಟ ಸರ್ಕಾರ ಇದೆ. ರೈತರಿಗೆ ಬೆಳೆ ಪರಿಹಾರ ಕೊಟ್ಟಿಲ್ಲ ಸರ್ಕಾರ. ಅತಿವೃಷ್ಟಿ ಸಂದರ್ಭದಲ್ಲಿ ರೈತರು ಸಂಕಷ್ಟದಲ್ಲಿದ್ದರು. ಸರ್ಕಾರ ಜವಾಬ್ದಾರಿ ಮರೆತಿತ್ತು. ಸಚಿವರು ರೈತರ ಕಷ್ಟ ಕೇಳಲು ಹೋಗಲಿಲ್ಲ. ಈ ಸರ್ಕಾರಕ್ಕೆ ರೈತರ ಕಷ್ಟ ಕೇಳೋ ಜವಾಬ್ದಾರಿ ಇಲ್ಲ. ಕೇಂದ್ರದ ವಿರುದ್ಧ ಆರೋಪ ಮಾಡ್ತಾ ಸಿದ್ದರಾಮಯ್ಯ ಕಪಟ ನಾಟಕ ಆಡ್ತಿದ್ದಾರೆ. ಯಡಿಯೂರಪ್ಪ ಕಪಟ ನಾಟಕ ಆಡಲಿಲ್ಲ..,
ಒಬ್ಬರೇ ಕೇಂದ್ರಕ್ಕೆ ಕಾಯದೇ ಮನೆ ಕಳೆದುಕೊಂಡವರಿಗೆ ಸ್ಪಾಟ್‌ನಲ್ಲಿ ಪರಿಹಾರ ಘೋಷಣೆ ಮಾಡಿ ಕೊಟ್ರು. ಕಬ್ಬು ಬೆಳಗಾರರ ಹೋರಾಟ ನಡೀತು. ಒಬ್ಬ ಸಚಿವನೂ ಬರಲಿಲ್ಲ. ರೈತ ಆತ್ಮಹತ್ಯೆ ಯತ್ನ ಮಾಡಿಕೊಂಡಾಗ ಆಸ್ಪತ್ರೆಗೆ ಸಚಿವರು ಯಾರೂ ಹೋಗಲಿಲ್ಲ. ಇವರ ಯೊಗ್ಯತೆಗೆ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭ ಮಾಡಲಿಲ್ಲ. ದಳ್ಳಾಳಿಗಳ ಪರ ಈ ಸರ್ಕಾರ ಇದೆ ಎಂದು ವಾಗ್ದಾಳಿ ನಡೆಸಿದರು.














