ಮನೆ ರಾಜ್ಯ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ ಖಂಡಿಸಿ ಮೈಸೂರಿನಲ್ಲೂ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ

ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ ಖಂಡಿಸಿ ಮೈಸೂರಿನಲ್ಲೂ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ

0

ಮೈಸೂರು: ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಇಟ್ಟು ಖಾಸಗಿ ವಿಡಿಯೋ ಚಿತ್ರೀಕರಣ ಘಟನೆಯನ್ನ ಖಂಡಿಸಿ ಇಂದು  ರಾಜ್ಯಾದ್ಯಂತ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ ನಡೆಸುತ್ತಿದ್ದು ಮೈಸೂರಿನಲ್ಲೂ ಧರಣಿ ನಡೆಯಿತು.

Join Our Whatsapp Group

ತಪ್ಪಿತಸ್ಥರ ಬಂಧನಕ್ಕೆ ಆಗ್ರಹಿಸಿ ಮೈಸೂರಿನ  ಜಿಲ್ಲಾ ಪಂಚಾಯತ್ ಮುಂಭಾಗ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯ ನೇತೃತ್ವವನ್ನು ಬಿಜೆಪಿ ಮಹಿಳಾ ಮೋರ್ಚಾದ ಮಮತಾ ಚಂದ್ರಶೇಖರ್ ವಹಿಸಿದ್ದರು.

ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.  ಪ್ರತಿಭಟನೆಯಲ್ಲಿ ಉಪಮೇಯರ್ ರೂಪ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಹೇಮಾ ನಂದೀಶ್, ಸೇರಿದಂತೆ ನೂರಾರು ಮಹಿಳಾ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.

ಪ್ರತಿಭಟನೆಯಲ್ಲಿ ಮಾತನಾಡಿದ ಮೈಸೂರು ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಹೇಮಾ ನಂದೀಶ್, ಘಟನೆ ಕುರಿತು ರಾಜ್ಯದ ಗೃಹ ಸಚಿವರು ಬೇಜವಾಬ್ದಾರಿಯ ಹೇಳಿಕೆ ನೀಡಿದ್ದಾರೆ. ಅತ್ಯಂತ ಗಂಭೀರ ಪ್ರಕರಣವನ್ನು ಸಣ್ಣ ಘಟನೆ ಎಂದು ಹಾರಿಕೆಯ ಹೇಳಿಕೆ ಕೊಟ್ಟಿದ್ದಾರೆ. ಒಂದು ವೇಳೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಪುತ್ರಿಗೆ ಈ ರೀತಿ ಆಗಿದ್ದರೆ ಸುಮ್ಮನಿರುತ್ತಿದ್ರಾ? ಎಂದು ಕಿಡಿಕಾರಿದರು.

ಉಡುಪಿ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ, ತಕ್ಕ ಶಿಕ್ಷೆ ವಿಧಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಜೈನಮುನಿಗಳ ಹತ್ಯೆ, ಯುವ ಬ್ರಿಗೇಡ್ ನ ವೇಣುಗೋಪಾಲ್ ಹತ್ಯೆ ಸೇರಿದಂತೆ ಹಲವಾರು ಅಪರಾಧ ಪ್ರಕರಣಗಳು ನಡೆದಿವೆ. ನೈತಿಕ ಹೊಣೆ ಹೊತ್ತು  ಗೃಹ ಸಚಿವ ಪರಮೇಶ್ವರ್ ರವರು ರಾಜೀನಾಮೆ ನೀಡಬೇಕು. ಈ ಪ್ರಕರಣ ಸಂಬಂಧ ನಾವು ನಿರಂತರವಾಗಿ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಮಾ ನಂದೀಶ್ ಹೇಳಿದರು.

ಹಿಂದಿನ ಲೇಖನಮಳವಳ್ಳಿಯಲ್ಲಿ ವಾಹನ ಕಳ್ಳರ ಬಂಧನ
ಮುಂದಿನ ಲೇಖನಮಳೆಯಿಂದ ಹಾನಿ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ : ಡಾ.ಕೆ ವಿ ರಾಜೇಂದ್ರ