ಬೆಂಗಳೂರು(Bengaluru): ಲಂಚ- ಮಂಚದ ಸರ್ಕಾರ ಎಂದು ಆರೋಪ ಮಾಡಿದ್ದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ‘ತಮ್ಮ ಮನೆಯ ಹೆಂಚು ತೂತು’ ಎಂಬುದೇ ಗೊತ್ತಿಲ್ಲ ಎಂದು ಬಿಜೆಪಿ ಟ್ವಿಟ್ಟರ್ ನಲ್ಲಿ ತೀವ್ರ ವಾಗ್ದಾಳಿ ನಡೆಸಿದೆ.
ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಉದ್ಯೋಗ ಪಡೆಯಲು ಯುವತಿಯರು ಮಂಚ ಹತ್ತಬೇಕು ಮತ್ತು ಯುವಕರು ಲಂಚನೀಡಬೇಕು ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಬಿಜೆಪಿ ಟ್ವಿಟರ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ.
ಈ ಕುರಿತು ಇಂದು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಸಾವಿರಾರು ಮಹಿಳೆಯರು, ಪ್ರತಿಭಾವಂತರು, ವಿದ್ಯಾವಂತರು ಕಷ್ಟಪಟ್ಟು, ಅನೇಕ ಪರೀಕ್ಷೆಗಳನ್ನು ಉತ್ತೀರ್ಣರಾಗಿ, ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ಪ್ರಿಯಾಂಕ ಖರ್ಗೆ ಅವರೇ ನಿಮ್ಮ ಈ ಮಾತುಗಳು, ಅಷ್ಟು ಜನ ಮಹಿಳೆಯರಿಗೆ ಅವಮಾನ ಮಾಡಿದಂತಲ್ಲವೇ? ಕೂಡಲೇ ಕ್ಷಮೆಯಾಚಿಸಿ ಎಂದು ಬಿಜೆಪಿ ಆಗ್ರಹಿಸಿದೆ.
ಇವರು ಆರೋಪ ಮಾಡಿದ ಬೆನ್ನಲ್ಲೆ ಜಯಮಾಲಾ ಅವರ ಲಂಚದ ಹಗರಣ ಬಯಲಾಗಿದೆ. ಹಾಗಾದರೆ ಲಂಚದ ಸರ್ಕಾರ ಯಾರದ್ದು ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ನಾಯಕರ ರಾತ್ರಿ ಬದುಕಿನ ರಂಗ-ಬಿರಂಗಿ ಬಗ್ಗೆ ಸಾಕಷ್ಟು ದಂತಕತೆಗಳು ಮಾತ್ರವಲ್ಲ, ಗುಪ್ತ ಸಿಡಿಗಳೂ ಇವೆ. ಜೂನಿಯರ್ ಖರ್ಗೆ ಅವರೇ, ಸಭ್ಯಸ್ಥರ ಮುಖವಾಡ ಹಾಕಿ ಸಮಾಜದ ಕಣ್ಣಿಗೆ ಗಣ್ಯರೆಂದು ಬಿಂಬಿಸಿಕೊಂಡ ಕಾಂಗ್ರೆಸ್ ಗೋಮುಖ ವ್ಯಾಘ್ರಗಳ ಪಟ್ಟಿ ನೀಡಿದರೆ ಸಮರ್ಥನೆ ಮಾಡಿಕೊಳ್ಳುವುದಕ್ಕೂ ನಿಮಗೆ ಕಷ್ಟವಾಗಬಹುದು ಬಿಜೆಪಿ ವಾಗ್ದಾಳಿ ನಡೆಸಿದೆ.