ಮನೆ ರಾಜ್ಯ ಜಿಬಿಎ ಚುನಾವಣೆ 5 ಪಾಲಿಕೆಯಲ್ಲಿ ಬಿಜೆಪಿ ಗೆಲ್ಲಲಿದೆ – ಬಿವೈ. ವಿಜಯೇಂದ್ರ

ಜಿಬಿಎ ಚುನಾವಣೆ 5 ಪಾಲಿಕೆಯಲ್ಲಿ ಬಿಜೆಪಿ ಗೆಲ್ಲಲಿದೆ – ಬಿವೈ. ವಿಜಯೇಂದ್ರ

0

ಬೆಂಗಳೂರು : ಜಿಬಿಎ ಚುನಾವಣೆ ಯಾವಾಗಲೇ ನಡೆದರೂ 5 ಪಾಲಿಕೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಜಿಬಿಎ ಚುನಾವಣೆ ವಿಚಾರವಾಗಿ ಚುನಾವಣೆ ಉಸ್ತುವಾರಿ ರಾಮ್ ಮಾಧವ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು.

ಈ ಸಭೆ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ವಿಜಯೇಂದ್ರ, ಜಿಬಿಎ ಚುನಾವಣೆ ಯಾವತ್ತೇ ನಡೆದರೂ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಚರ್ಚೆ ಮಾಡಿದ್ದೇವೆ. 5 ಮಹಾನಗರ ಪಾಲಿಕೆಗಳಲ್ಲಿ ಗೆಲ್ಲುವ ಅವಕಾಶ ಇದೆ. ಆದಷ್ಟು ಬೇಗ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಹಿರಿಯ ನಾಯಕರ ತಂಡ ಮಾಡಿ ಜೆಡಿಎಸ್ ಜೊತೆ ಮಾತುಕತೆ ಮಾಡಿ ಸಜ್ಜಾಗಬೇಕು ಎಂದು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

ಫೆ.28 ಮತ್ತು ಮಾ.1 ರಂದು 5 ಮಹಾನಗರ ಪಾಲಿಕೆಗಳ ಪ್ರತ್ಯೇಕ ಸಭೆ ಮಾಡಲು ತೀರ್ಮಾನ ಮಾಡಲಾಗಿದೆ. ಬೆಂಗಳೂರು ಮಹಾನಗರಕ್ಕೆ ಕಾಂಗ್ರೆಸ್ ಸರ್ಕಾರ ಮತ್ತು ಉಸ್ತುವಾರಿ ಸಚಿವರು ಆದ್ಯತೆ ನೀಡದಿರುವುದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ‌. ಟನಲ್ ರೋಡ್ ಬಗ್ಗೆ ಮಾತಾಡುವ ಕಾಂಗ್ರೆಸ್ ಸರ್ಕಾರಕ್ಕೆ ಒಂದು ಗುಂಡಿ ಮುಚ್ಚುವ ಯೋಗ್ಯತೆ ಇಲ್ಲ. ಡಿ.ಕೆ. ಶಿವಕುಮಾರ್ ಅವರ ನಡವಳಿಕೆಯನ್ನು ಜನ ಗಮನಿಸುತ್ತಿದ್ದಾರೆ.

ಯಡಿಯೂರಪ್ಪ, ಬೊಮ್ಮಾಯಿ‌ ಸಿಎಂ ಆಗಿದ್ದಾಗ ಬೆಂಗಳೂರಿನ ಅಭಿವೃದ್ಧಿ ಏನಾಗಿತ್ತು ಎಂದು ಜನರ ಮುಂದೆ ತೆಗೆದುಕೊಂಡು ಹೋಗಲು ತೀರ್ಮಾನಿಸಲಾಗಿದೆ. ಕಾಂಗ್ರೆಸ್ ಸರ್ಕಾರದ ವೈಫಲ್ಯದ ಬಗ್ಗೆ ಜನರಿಗೆ ತಿಳಿಸುತ್ತೇವೆ ಅಂತ ತಿಳಿಸಿದರು. ಜಿಬಿಎನಲ್ಲಿ ಜೆಡಿಎಸ್‌ಗೆ ಸೀಟು ಬಿಟ್ಟು ಕೊಡುವ ಬಗ್ಗೆ ಹಿರಿಯರ ತಂಡ ಮಾಡಿ ಚರ್ಚೆ ತೀರ್ಮಾನ ಮಾಡುತ್ತೇವೆ. ದೇವೇಗೌಡರು ಕೂಡಾ ಮೈತ್ರಿ ಬಗ್ಗೆ ಮಾತನಾಡಿದ್ದಾರೆ. ಬೇರೆ ಬೇರೆ ನಾಯಕರು ಕೂಡಾ ಮಾತಾಡಿದ್ದಾರೆ. ನಮ್ಮದು ರಾಷ್ಟ್ರೀಯ ಪಕ್ಷ, ರಾಷ್ಟ್ರೀಯ ನಾಯಕರು ಹೇಳಿದಂತೆ ನಾವು ನಡೆದುಕೊಳ್ಳಬೇಕಾಗುತ್ತದೆ ಅಂತ ತಿಳಿಸಿದರು.