ಮನೆ ರಾಜಕೀಯ ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ಬಿ.ಕೆ.ಹರಿಪ್ರಸಾದ್ ನೇಮಕ

ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ಬಿ.ಕೆ.ಹರಿಪ್ರಸಾದ್ ನೇಮಕ

0

ನವದೆಹಲಿ:  ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ನಿರ್ಮಾಣವಾಗುತ್ತಿರುವ ಬೆನ್ನಲ್ಲೆ ಕಾಂಗ್ರೆಸ್ ಹೈಕಮಾಂಡ್ ಇಂದು ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರನ್ನಾಗಿ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅವರನ್ನು ನೇಮಕ ಮಾಡಿದೆ.
ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಲಾಗುತ್ತಿರುವುದರ ನಡುವೆ  ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಧ್ಯೆ ಮುಖ್ಯಮಂತ್ರಿ ಆಗಲು ಪೈಪೋಟಿ ಕೂಡ ಶುರುವಾಗಿದೆ. ಈ ನಡುವೆ ಪಕ್ಷದ ಹಿರಿಯ ಮುಖಂಡ, ಲಿಂಗಾಯತ ಸಮುದಾಯದ ಮುಂಚೂಣಿ ನಾಯಕ, ಉತ್ತರ ಕರ್ನಾಟಕ ಮೂಲದ ಎಂ.ಬಿ. ಪಾಟೀಲ್ ಅವರನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ.

ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರನ್ನಾಗಿ ಬಿಕೆ ಹರಿಪ್ರಸಾದ್ ಅವರನ್ನು ನೇಮಕ ಮಾಡುವ ಮೂಲಕ ಹೈಕಮಾಂಡ್ ಭಾರೀ ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯ ಕಾಂಗ್ರೆಸ್ ‌ನಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ‌ ಶಿವಕುಮಾರ್ ನಡುವೆ ಪೈಪೋಟಿ ನಡೆಯುತ್ತಿರುವುದರಿಂದ ಇಬ್ಬರಿಗೂ ಮಣಿಯದೆ, ಇಬ್ಬರ ಜೊತೆಯೂ ಯಾವುದೇ ಮುಲಾಜು ಇಲ್ಲದೆ ಮಾತನಾಡುವ ಹಿರಿಯ ನಾಯಕ ಹರಿಪ್ರಸಾದ್ ಅವರಿಗೆ ಮಹತ್ವದ ಹುದ್ದೆ ನೀಡಿದೆ.
ಈಡಿಗ ಮತ ಸೆಳೆಯುವ ಪ್ರಯತ್ನ: ಬಿ.ಕೆ. ಹರಿಪ್ರಸಾದ್ ಅಪ್ಪಟ ಕಾಂಗ್ರೆಸ್ಸಿಗ. ಕಾಂಗ್ರೆಸ್ ಸಿದ್ದಾಂತಗಳನ್ನು ಶೇಕಡಾ ನೂರರಷ್ಟು ಮೈಗೂಡಿಸಿಕೊಂಡಿರುವ ಮುಖಂಡ. ಆರ್ ಎಸ್ ಎಸ್ ಮತ್ತು ಬಿಜೆಪಿ ಸಿದ್ದಾಂತಗಳ ಕಡು ವಿರೋಧಿ. ಅಷ್ಟೇಯಲ್ಲ, ಆರ್ ಎಸ್ ಎಸ್ ಹಾಗೂ ಬಿಜೆಪಿಯ ಸಮಾಜವಿರೋಧಿ ನಡೆಗಳನ್ನು, ಧರ್ಮದ ಹೆಸರಿನಲ್ಲಿ ನಡೆಸುವ ರಾಜಕಾರಣವನ್ನು ಬಿ.ಕೆ.‌ ಹರಿಪ್ರಸಾದ್ ಬಹಿರಂಗವಾಗಿ ವಿರೋಧ ಮಾಡುತ್ತಾರೆ. ಈ ಸೈದ್ಧಾಂತಿಕ ಬದ್ದತೆ ಕೂಡ ಅವರಿಗೆ ಮಹತ್ವದ ಸ್ಥಾನ ನೀಡಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.‌ ಇದಲ್ಲದೆ ಕಾಗೋಡು ತಿಮ್ಮಪ್ಪ ಅವರಿಂದ ಹಿಡಿದು ರಾಜ್ಯ ಕಾಂಗ್ರೆಸ್ ಪಕ್ಷದ ಹಲವು ಈಡಿಗ ನಾಯಕರು ಈಗ ಸಕ್ರಿಯವಾಗಿಲ್ಲ. ಬಿ.ಕೆ.‌ ಹರಿಪ್ರಸಾದ್ ಮಾತ್ರ ಆ ಸಮುದಾಯದಿಂದ ಹೆಚ್ಚು ಪ್ರಭಾವ ಹೊಂದಿರುವವರು. ಕರುಬರ ನಂತರ ಅತಿ ದೊಡ್ಡ ಈಡಿಗ ಸಮುದಾಯವನ್ನು ಒಲಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ಅನಿವಾರ್ಯವಾಗಿ ಹರಿಪ್ರಸಾದ್ ಅವರಿಗೆ ವಿರೋಧ ಪಕ್ಷದ ನಾಯಕನ‌ ಸ್ಥಾನವನ್ನು ನೀಡಲೇಬೇಕಾಯಿತು ಎಂದು ಕೂಡ ಹೇಳಲಾಗುತ್ತಿದೆ.