ಬೆಂಗಳೂರು : ರಕ್ತದಾನ ಏಕ ಕಾಲಕ್ಕೆ ಜೀವದಾನವೂ ಹೌದು ಜಾತ್ಯತೀತತೆಯ ಆಚರಣೆಯೂ ಹೌದು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯ ಪಟ್ಟರು.
ರೆಡ್ ಕ್ರಾಸ್ ಸಂಸ್ಥೆ ಆಯೋಜಿಸಿದ್ದ 20ನೇ ವರ್ಷದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಇತರೆ ಸಂದರ್ಭಗಳಲ್ಲಿ ನಾವು ನಮ್ಮದೇ ಜಾತಿಯವರನ್ನು, ಧರ್ಮದವರನ್ನು ಹುಡುಕುತ್ತೇವೆ. ಆದರೆ ಜೀವಕ್ಕೆ ಅಪಾಯ ಬಂದಾಗ, ತುರ್ತು ಸಂದರ್ಭಗಳಲ್ಲಿ ನಮಗೆ ಜಾತಿ, ಧರ್ಮ ಯಾವುದರ ಅಗತ್ಯವೂ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ರಕ್ತದ ಅಗತ್ಯ ಬಿದ್ದಾಗ ಯಾವುದೇ ಜಾತಿಯವರದ್ದಾಗಿರಲಿ, ಯಾವುದೇ ಧರ್ಮದವರದ್ದಾಗಿರಲಿ ಮೊದಲು ರಕ್ತ ಸಿಕ್ಕರೆ ಸಾಕು ಎನ್ನುವಷ್ಟು ಕಾತರರಾಗಿರುತ್ತೇವೆ. ಇದೇ ಬದುಕಿನ ಅಂತಿಮ ಸತ್ಯ ಎಂದು ವಿವರಿಸಿದರು.
ರಕ್ತದಾನ ಏಕ ಕಾಲಕ್ಕೆ ಆರೋಗ್ಯ ದಾನ ಮತ್ತು ಜೀವ ದಾನವೂ ಆಗಿರುವಂತೆಯೇ ರಕ್ತದಾನಿಗಳ ಆರೋಗ್ಯವೂ ವೃದ್ಧಿಯಾಗುತ್ತದೆ.
ರಕ್ತದಾನಕ್ಕೆ ಹೋಗಿ ತಮ್ಮ ಜೀವ ಉಳಿದಿಕೊಂಡವರ ಸಾವಿರಾರು ಉದಾಹರಣೆಗಳಿವೆ. ರಕ್ತ ಕೊಡಲು ಹೋದಂಥಾ ಸಂದರ್ಭದಲ್ಲಿ ರಕ್ತ ಪರೀಕ್ಷೆ ಮಾಡಬೇಕಾಗುತ್ತದೆ. ಈ ಪರೀಕ್ಷೆ ಸಂದರ್ಭದಲ್ಲಿ ರಕ್ತದಲ್ಲಿರುವ ಸೋಂಕಿನ ಪತ್ತೆಯಾಗಿ ರಕ್ತದಾನಿಗಳು ಚಿಕಿತ್ಸೆ ಪಡೆದು ತಮ್ಮ ಜೀವ ಉಳಿಸಿಕೊಂಡಿದ್ದಾರೆ ಎಂದರು.
ನಿವೃತ್ತ ಪೊಲೀಸ್ ಅಧಿಕಾರಿ ಗೋಪಾಲ್ ಹೊಸೂರ್, ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷರಾದ ಆನಂದ್ ಜಿಗ್ ಜಿನ್ನಿ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.