ಮನೆ ರಾಜ್ಯ ತುಮಕೂರಿಗೆ ಮೆಟ್ರೋ – DPR ತಯಾರಿಸಲು ಟೆಂಡರ್‌ ಕರೆದ BMRCL

ತುಮಕೂರಿಗೆ ಮೆಟ್ರೋ – DPR ತಯಾರಿಸಲು ಟೆಂಡರ್‌ ಕರೆದ BMRCL

0

ಬೆಂಗಳೂರು : ತುಮಕೂರಿಗೆ ಮೆಟ್ರೋ ಸೇವೆಗಳನ್ನು ವಿಸ್ತರಿಸಲು ಸಮಗ್ರ ಯೋಜನಾ ವರದಿ ತಯಾರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಟೆಂಡರ್ ಕರೆದಿದೆ. ಈಗಾಗಲೇ ಸಿಲ್ಕ್ ಇನ್‌ಸ್ಟಿಟ್ಯೂಟ್‌ನಿಂದ ಮಾದಾವರದವರೆಗೆ ಹಸಿರು ಮಾರ್ಗದ ಮೆಟ್ರೋ ಸೇವೆಯಿದೆ. ಹೊಸ ಪ್ರಸ್ತಾವಿತ 59.6 ಕಿಮೀ ಮಾರ್ಗವು ಮಾದಾವರದಿಂದ ತುಮಕೂರುವರೆಗೆ ವಿಸ್ತರಣೆಯಾಗಲಿದೆ.

ಬೊಮ್ಮಸಂದ್ರ-ಹೊಸೂರು ಮೆಟ್ರೋ ವಿಸ್ತರಣೆಯು ಆಮೆ ವೇಗದಲ್ಲಿ ಸಾಗುತ್ತಿದೆ. ಒಂದು ವೇಳೆ ಈ ಯೋಜನೆ ಯಶಸ್ವಿಯಾದರೆ ರಾಜ್ಯದ ಮೊದಲ ಅಂತರ-ನಗರ ಮೆಟ್ರೋ ಯೋಜನೆಯಾಗಲಿದೆ.

ಈ ಹಿಂದೆ ಮಾದಾವರ-ತುಮಕೂರು ಕಾರಿಡಾರ್‌ನ ಡಿಪಿಆರ್‌ಗಾಗಿ ಕಾರ್ಯಸಾಧ್ಯತಾ ಅಧ್ಯಯನವನ್ನು ಕೈಗೊಳ್ಳಲು ಸರ್ಕಾರದ ನಿರ್ದೇಶನ ನೀಡಿತ್ತು. ಮೇ ತಿಂಗಳಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾದ ಕಾರ್ಯಸಾಧ್ಯತಾ ಅಧ್ಯಯನವನ್ನು ಅಂತಿಮವಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಡಿಯಲ್ಲಿ ಜಾರಿಗೊಳಿಸಲು ಅನುಮೋದಿಸಲಾಗಿದೆ.

ಈ ಯೋಜನೆಗೆ 20,649 ಕೋಟಿ ರೂ. ವೆಚ್ಚವಾಗುವ ನಿರೀಕ್ಷೆ ಇದೆ. ಬಿಡ್‌ದಾರರು 4.5 ಲಕ್ಷ ರೂ. ಹೆಚ್ಚು ಮುಂಗಡ ಹಣದೊಂದಿಗೆ ನ.20ರ ಒಳಗಡೆ ಟೆಂಡರ್‌ಗೆ ಅರ್ಜಿ ಸಲ್ಲಿಸಬೇಕೆಂದು ಸೂಚಿಸಲಾಗಿದೆ. ಬಿಡ್‌ದಾರರ ಆಯ್ಕೆಯ ನಂತರ ಡಿಪಿಆರ್ ತಯಾರಿಕೆಗೆ ಕನಿಷ್ಠ 4-5 ತಿಂಗಳುಗಳು ಬೇಕಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.