ನೈಜೀರಿಯಾ: ನೈಜರ್ ನದಿಯ ಉದ್ದಕ್ಕೂ ಆಹಾರ ಮಾರುಕಟ್ಟೆಗೆ ಸಾಗಿಸುತ್ತಿದ್ದ ದೋಣಿಯೊಂದು ಶುಕ್ರವಾರ (ನ.29) ಮುಳುಗಡೆಯಾಗಿದೆ. ಘಟನೆಯಲ್ಲಿ ಕನಿಷ್ಠ 27 ಜನರು ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಮಹಿಳೆಯರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋಗಿ ರಾಜ್ಯದಿಂದ ನೆರೆಯ ನೈಜರ್ಗೆ ಹೋಗುತ್ತಿದ್ದ ಬೋಟ್ನಲ್ಲಿ ಸುಮಾರು 200 ಪ್ರಯಾಣಿಕರಿದ್ದರು ಎಂದು ನೈಜರ್ ರಾಜ್ಯ ತುರ್ತು ನಿರ್ವಹಣಾ ಸಂಸ್ಥೆಯ ವಕ್ತಾರ ಇಬ್ರಾಹಿಂ ಔಡು ಅಸೋಸಿಯೇಟೆಡ್ ಪ್ರೆಸ್ಗೆ ತಿಳಿಸಿದ್ದಾರೆ.
ಕೋಗಿ ರಾಜ್ಯ ತುರ್ತು ಸೇವೆಗಳ ವಕ್ತಾರ ಸಾಂಡ್ರಾ ಮೂಸಾ ಪ್ರಕಾರ, ಸ್ಥಳೀಯ ಡೈವರ್ ಗಳು ಶುಕ್ರವಾರ ಸಂಜೆಯ ವೇಳೆಗೆ 27 ಶವಗಳನ್ನು ನದಿಯಿಂದ ಹೊರತೆಗೆದಿದ್ದಾರೆ. ಇನ್ನೂ ಹುಡುಕು ಕಾರ್ಯಾಚರಣೆ ನಡೆಯುತ್ತಿದೆ.
ಘಟನೆ ಸಂಭವಿಸಿ ಸುಮಾರು 12 ಗಂಟೆಗಳ ನಂತರವೂ ಯಾರೂ ಬದುಕುಳಿದವರು ಪತ್ತೆಯಾಗಲಿಲ್ಲ ಎಂದು ವರದಿಯಾಗಿದೆ.
ಮುಳುಗಡೆಗೆ ಕಾರಣವೇನು ಎಂಬುದನ್ನು ಅಧಿಕಾರಿಗಳು ದೃಢಪಡಿಸಿಲ್ಲ, ಆದರೆ ಸ್ಥಳೀಯ ಮಾಧ್ಯಮಗಳು ಬೋಟ್ ಓವರ್ ಲೋಡ್ ಆಗಿರಬಹುದು ಎಂದು ಸೂಚಿಸಿವೆ. ನೈಜೀರಿಯಾದ ದೂರದ ಭಾಗಗಳಲ್ಲಿ ದೋಣಿಗಳಲ್ಲಿ ಜನದಟ್ಟಣೆ ಸಾಮಾನ್ಯವಾಗಿದೆ.