ಬೆಂಗಳೂರು: ಬೆಂಗಳೂರು ಹೊರವಲಯದ ಚಂದಾಪುರ ಸಮೀಪದ ಹೀಲಲಿಗೆ ಬಳಿಯಿರುವ ಬಿಸಿಇಟಿ ಇಂಜಿನಿಯರಿಂಗ್ ಕಾಲೇಜಿನ ವಸತಿ ನಿಲಯದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಹರ್ಷಿತಾ (18) ಮೃತದೇಹ ಪತ್ತೆಯಾಗಿದೆ.
ಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕರಡಿಹಳ್ಳಿ ಗ್ರಾಮದ ವಿದ್ಯಾರ್ಥಿನಿ ಹರ್ಷಿತ ಕಾಲೇಜ್ ಅಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಳು. ಹರ್ಷಿತಾ ಕಾಲೇಜಿನ ವಸತಿ ನಿಲಯದಲ್ಲಿದ್ದು, ವಿದ್ಯಾಭ್ಯಾಸ ಮಾಡುತ್ತಿದ್ದಳು.
ಪಕ್ಕದ ಕೋಣೆಯಲ್ಲಿದ್ದ ಪ್ರಗತಿ ಎಂಬ ವಿದ್ಯಾರ್ಥಿನಿ ಹರ್ಷಿತಾ ಇದ್ದ ಕೋಣೆಯ ಬಾಗಲಿನ್ನು ಸಾಕಷ್ಟು ಸಾರಿ ಬಡೆಯುತ್ತಾಳೆ. ಆದರೆ ಹರ್ಷಿತಾ ಬಾಗಿಲು ತೆಗೆಯುವುದಿಲ್ಲ. ಅನುಮಾನಗೊಂಡ ಪ್ರಗತಿ ಸ್ಟೂಲ್ ಮೇಲೆ ಹತ್ತಿ, ಕಿಟಕಿಯಿಂದ ಇಣುಕಿ ನೋಡಿದಾಗ ಹರ್ಷಿತಾಳ ನೇಣು ಬಿಗಿದ ಸ್ಥಿತಿಯಲ್ಲಿ ಕಂಡಿದ್ದಾಳೆ. ಕೂಡಲೆ ಪ್ರಗತಿ ಅಕ್ಕ-ಪಕ್ಕದ ಕೋಣೆಯಲ್ಲಿದ್ದ ಸಹಪಾಠಿಗಳಿಗೆ ವಿಷಯ ತಿಳಿಸುತ್ತಾಳೆ. ಬಳಿಕ ಎಲ್ಲರೂ ಸೇರಿ ಬಾಗಿಲು ಮುರಿದು ಹರ್ಷಿತಾ ಕೋಣೆಯೊಳಗಡೆ ಹೋಗಿ, ಆಕೆಯನ್ನು ನೇಣು ಕುಣಿಕೆಯಿಂದ ಕೆಳಗೆ ಇಳಿಸಿ ಆಸ್ಪತ್ರೆಗೆ ಕರೆದೆಯ್ಯೊಲು ಮುಂದಾಗುತ್ತಾರೆ. ಆದರೆ ಅಷ್ಟೊತ್ತಿಗಾಗಲೆ ಹರ್ಷಿತಾ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಹರ್ಷಿತಾ ನೇಣು ಹಾಕಿಕೊಂಡಿದ್ದ ವಿಚಾರವನ್ನು ವಿದ್ಯಾರ್ಥಿನಿಯರು ಕಾಲೇಜು ಪ್ರಾಧ್ಯಾಪಕಿ ಭಾರತಿ ತಿಳಿಸುತ್ತಾರೆ. ಆಗ ಪ್ರಾಧ್ಯಾಪಕಿ ಭಾರತಿ, “ಬಾಗಿಲು ಯಾಕೆ ತೆರೆದೆ” ಎಂದು ವಿದ್ಯಾರ್ಥಿನಿ ಪ್ರಗತಿಯನ್ನು ಪ್ರಶ್ನೆ ಮಾಡುತ್ತಾರೆ. ಅಲ್ಲದೆ ಬೇಜವಾಬ್ದಾರಿಯಾಗಿ ಮಾತನಾಡುತ್ತಾರೆ. ಪ್ರಾಧ್ಯಾಪಕಿ ಭಾರತಿ ವರ್ತನೆಯಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಇಂದು (ಮೇ 17) ಕಾಲೇಜು ಎದುರು ಪ್ರತಿಭಟನೆ ಮಾಡಿದರು.
ಹರ್ಷಿತಾ ಮೃತಪಟ್ಟಾಗ ರಕ್ಷಣೆಗೆ ವಸತಿ ನಿಲಯದಲ್ಲಿ ಯಾರು ಇರಲಿಲ್ಲ. ಹಾಸ್ಟೆಲ್ ಆಡಳಿತ ವ್ಯವಸ್ಥೆ ಸರಿಯಿಲ್ಲ. ಹಾಸ್ಟಲ್ನಲ್ಲಿ ವಾರ್ಡನ್ ಇಲ್ಲ. ಆಯರನ್ನೇ ವಾರ್ಡನ್ ಅಂತ ಹೇಳುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿದ್ದಾರೆ.
ಆಡಳಿತ ಮಂಡಳಿ ಸಾಕಷ್ಟು ದಿನಗಳಿಂದ ಹರ್ಷಿತಾಳಿಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ವಿದ್ಯಾರ್ಥಿನಿ ಹರ್ಷಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹರ್ಷಿತಾ ಸಹಪಾಠಿಗಳು ಆರೋಪಿಸಿದ್ದಾರೆ.