ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದ ರಹಮತ್ ನಗರದ ಅಡುಗೆ ಎಣ್ಣೆ ಮಿಲೊಂದರಲ್ಲಿ ಸಂಭವಿಸಿದ ಬಾಯ್ಲರ್ ಸ್ಫೋಟವು ಕಾರ್ಮಿಕರೊಬ್ಬರ ಜೀವವನ್ನು ಕಸಿದುಕೊಂಡಿದೆ. ಈ ದುರ್ಘಟನೆಯಲ್ಲಿ ಕಾರ್ಮಿಕ ರಫಿಕ್ ಸೈಯದ್ ಕುಡುಚಿ (35) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಜಮಖಂಡಿಯ ರಹಮತ್ ನಗರದ ಅಡುಗೆ ಎಣ್ಣೆ ಉತ್ಪಾದನಾ ಘಟಕದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಬಾಯ್ಲರ್ನಲ್ಲಿ ತಾಂತ್ರಿಕ ದೋಷವೊಂದರಿಂದ ತೀವ್ರ ಸ್ಪೋಟ ಉಂಟಾಗಿದೆ. ಈ ಸ್ಪೋಟದ ಪರಿಣಾಮವಾಗಿ ಕಾರ್ಮಿಕ ರಫಿಕ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸ್ಫೋಟ ಸಂಭವಿಸಿದಾಗ ಕಾರ್ಖಾನೆಯಲ್ಲಿ ಇತರರೂ ಕೆಲಸ ಮಾಡುತ್ತಿದ್ದರೆಂಬ ಮಾಹಿತಿ ದೊರಕಿದ್ದು, ಅವರಲ್ಲಿ ಕೆಲವರಿಗೆ ಗಾಯಗಳಾಗಿರುವ ಸಾಧ್ಯತೆಯಿದೆ. ಆದರೆ, ಇನ್ನೂ ಹೆಚ್ಚಿನ ಮಾಹಿತಿ ನಿರೀಕ್ಷೆಯಲ್ಲಿದೆ.
ಜಮಖಂಡಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯದಲ್ಲಿ ಮೃತದೇಹವನ್ನು ಪೋಸ್ಟ್ಮಾರ್ಟಂಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯ ನಿಖರ ಕಾರಣ ತಿಳಿದುಕೊಳ್ಳಲು ತಜ್ಞರ ತಪಾಸಣೆ ನಡೆಯುತ್ತಿದೆ.















