ಬಹುತೇಕ ವಾಹನ ಮಾಲೀಕರು ತಮ್ಮ ವಾಹನಗಳನ್ನು ಇತರೆ ವಾಹನಗಳಿಂತಲೂ ಭಿನ್ನವಾಗಿ ಕಾಣಲು ಒಂದಿಷ್ಟು ಹಣ ಖರ್ಚು ಮಾಡಿ ಮಾಡಿಫೈ ಮೋರೆ ಹೋಗುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಕಾರು ಮಾಲೀಕ ಮಾತ್ರ ಆಫ್ ರೋಡ್ ಡ್ರೈವ್ ಕ್ರೇಜ್ ಗೆ ತಕ್ಕಂತೆ ತನ್ನ ಬೊಲೆರೊ ಇನ್‌ವೇಡರ್ ಕಾರು ಮಾದರಿಯನ್ನೇ ಥಾರ್ ಮಾದರಿಯಲ್ಲಿ ಮಾಡಿಫೈಡ್‌ಗೊಳಿಸಿ ಗಮನಸೆಳೆದಿದ್ದಾನೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಆಫ್ ರೋಡ್ ಎಸ್ ಯುವಿ ಗಳನ್ನು ತಯಾರಿಸುವಲ್ಲಿ ಮುಂಚೂಣಿಯಲ್ಲಿರುವ ಮಹಿಂದ್ರಾ ಕಂಪನಿಯು ತನ್ನ ಪ್ರಮುಖ ಎಸ್ ಯುವಿಗಳನ್ನು ಭಾರೀ ಬದಲಾವಣೆಯೊಂದಿಗೆ ಮರುಪರಿಚಯಿಸುತ್ತಿದೆ. ಆದರೂ ಕೂಡಾ ಆಫ್-ರೋಡ್ ಡ್ರೈವ್ ಉತ್ಸಾಹಿಗಳಲ್ಲಿ ಹಳೆಯ ಥಾರ್ ಹೆಚ್ಚಿನ ಆಕರ್ಷಣೆ ಹುಟ್ಟುಹಾಕಿರುವುದು ಸುಳ್ಳಲ್ಲ. ಇದೇ ಕಾರಣಕ್ಕೆ ಮಾಡಿಫೈಗೊಳಿಸಲಾದ ಕಾರುಗಳಲ್ಲೂ ಮಹೀಂದ್ರಾ ಎಸ್ ಯುವಿಗಳು ಮುಂಚೂಣಿಯಲ್ಲಿದ್ದು, ಇತ್ತೀಚೆಗೆ ಮಾಡಿಫೈಗೊಳಿಸಲಾದ ಬೊಲೆರೊ ಇನ್ ವೇಡರ್ ಕಾರು ಮಾದರಿಯೊಂದು ಭಾರೀ ವೈರಲ್ ಆಗುತ್ತಿದೆ.
ಮಾಡಿಫೈಗೊಳಿಸಲಾದ ಬೊಲೆರೊ ಇನ್‌ವೇಡರ್ ಕಾರು ಮಾದರಿಯು ಥಾರ್ ಮಾದರಿಯಲ್ಲಿ ಮರುವಿನ್ಯಾಸಗೊಂಡಿದ್ದು, ಆಫ್ ರೋಡ್ ಕೌಶಲ್ಯಕ್ಕಾಗಿ ರೀಟೂನ್ಡ್ ಮಾಡಲಾದ ಸ್ಕಾರ್ಪಿಯೋ 2.6 ಲೀಟರ್ ಡೀಸೆಲ್ ಎಂಜಿನ್ ಜೋಡಣೆ ಹೊಂದಿದೆ. ಮಾಡಿಫೈ ಕಾರುಗಳನ್ನು ನಿರ್ಮಿಸುವಲ್ಲಿ ಮುಂಚೂಣಿಯಲ್ಲಿರುವ ಮಂಗಳೂರು ಮೂಲದ ಕೆಎಎಂ ಕಸ್ಟಮ್ ಸಂಸ್ಥೆಯು ಈ ವಿಶೇಷ ವಿನ್ಯಾಸದ ಮಾಡಿಫೈ ಕಾರು ಮಾದರಿಯನ್ನು ಸಿದ್ದಪಡಿಸಿದ್ದು, ಮಾಡಿಫೈ ಕಾರು ಮಾರುಕಟ್ಟೆಯಲ್ಲಿನ ಟ್ರೆಂಡ್ ಗೆ ತಕ್ಕಂತೆ ನಿರ್ಮಾಣಗೊಂಡಿದೆ.
2006ರ ಬೊಲೆರೊ ಇನ್ ವೇಡರ್ ಕಾರು ಮಾದರಿಯನ್ನು ಮಾಡಿಫೈ ಮಾಡಿರುವ ಕೆಎಎಂ ಕಸ್ಟಮ್ ಸಂಸ್ಥೆಯು ಸನ್ ಸೆಟ್ ಆರೆಂಜ್ ಶೇಡ್ ನಲ್ಲಿ ಹೊಸ ಕಾರನ್ನು ಸಿದ್ದಪಡಿಸಿದ್ದು, ಸ್ಟಾಕ್ ಫ್ರಂಟ್ ಗ್ರಿಲ್ ಅನ್ನು ಸ್ಟಿಂಗರ್ ಕಾನ್ಸೆಪ್ಟ್ ಗ್ರಿಲ್‌ನೊಂದಿಗೆ ಬದಲಾಯಿಸಲಾಗಿದೆ. ಜೊತೆಗೆ ಆಯತಾಕಾರದ ಹೆಡ್‌ಲ್ಯಾಂಪ್, ಆಫ್ಟರ್ ಮಾರ್ಕೆಟ್ ರೌಂಡ್ ಪ್ರೊಜೆಕ್ಟರ್ ಎಲ್ ಇಡಿ, ಇಂಟಿಗ್ರೇಟೆಡ್ ಫಾಗ್ ಲ್ಯಾಂಪ್, ಆಫ್-ರೋಡ್ ಸ್ಪೆಕ್ ಬಂಪರ್ ಗಳು ಮತ್ತು ಮುಂಭಾಗದಲ್ಲಿ ಬುಲ್ ಬಾರ್ ಜೋಡಿಸಲಾಗಿದೆ.
ಹಾಗೆಯೇ ಹೊಸ ಮಾಡಿಫೈ ಕಾರಿನಲ್ಲಿ 15-ಇಂಚಿನ ಮ್ಯಾಕ್ಸಿಸ್ ಬಿಗಾರ್ನ್ ಆಫ್-ರೋಡ್ ಟೈರ್, ಮೆಟಲ್ ಫುಟ್ ಬೋರ್ಡ್, ರೂಫ್ ಮೇಲೆ 51 ಇಂಚು ಉದ್ದದ ಎಲ್ ಇಡಿ ಲೈಟ್ ಬಾರ್ ಜೋಡಿಸಲಾಗಿದ್ದು, ಕಾರಿನ ಒಳಭಾಗದಲ್ಲಿ ಸ್ಪೋರ್ಟಿ ಲುಕ್ ನೀಡುವುದಕ್ಕಾಗಿ ಎಕ್ಸ್ ಯುವಿ500 ಮಾದರಿಯಲ್ಲಿನ ಆಸನ ಸೌಲಭ್ಯದೊಂದಿಗೆ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ನೀಡಲಾಗಿದೆ. ಆದರೆ ಈ ಮಾಡಿಫೈ ಕಾರಿಗಾಗಿ ಎಷ್ಟು ಖರ್ಚು ಮಾಡಲಾಗಿದೆ ಎಂಬುವುದನ್ನು ಕಂಪನಿಯು ಯಾವುದೇ ರೀತಿಯ ಮಾಹಿತಿ ಹಂಚಿಕೊಂಡಿಲ್ಲ.