ಮುಂಬೈ(Mumbai): ಬಾಲಿವುಡ್ ನಲ್ಲಿ ಪೋಷಕ ಪಾತ್ರದಲ್ಲಿ ಹೆಸರುವಾಸಿಯಾದ ನಟ ಮಿತಿಲೇಶ್ ಚತುರ್ವೇದಿ ನಿಧನರಾಗಿದ್ದಾರೆ.
ಅವರಿಗೆ 67 ವರ್ಷ ವಯಸ್ಸಾಗಿತ್ತು. ಲಖನೌದಲ್ಲಿ ಮಕ್ಕಳ ಜತೆ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬುಧವಾರ ರಾತ್ರಿ ನಿಧನರಾದರು ಎಂದು ಅವರ ಅಳಿಯ ಆಶಿಶ್ ಚತುರ್ವೇದಿ ಸಾಮಾಜಿಕ ಜಾಲತಾಣಗಳ ಮೂಲಕ ಖಚಿತಪಡಿಸಿದ್ದಾರೆ.
ಮಿತಿಲೇಶ್ ಚತುರ್ವೇದಿ ನಿಧನಕ್ಕೆ ಚಿತ್ರರಂಗದ ಅನೇಕ ಗಣ್ಯರು, ಆಪ್ತರು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಚಿತ್ರರಂಗ ಸೇರಿದಂತೆ ರಂಗಭೂಮಿಯಲ್ಲಿ ಅವರ ಸಕ್ರಿಯರಾಗಿದ್ದರು. ಹಲವು ಜಾಹೀರಾತುಗಳು, ವೆಬ್ ಸರಣಿಗಳಲ್ಲೂ ಅವರು ನಟಿಸಿದ್ದರು.
‘ತಾಲ್’, ‘ಗದ್ದರ್: ಏಕ್ ಪ್ರೇಮ್ ಕಥಾ’, ‘ಕೋಯಿ ಮಿಲ್ ಗಯಾ’, ‘ಬಂಟಿ ಔರ್ ಬಬ್ಲಿ’, ‘ಗಾಂಧಿ ಮೈ ಫಾದರ್’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು.