ಮನೆ ರಾಜ್ಯ ಬಾಂಬ್ ಬೆದರಿಕೆ ಪತ್ತೆ ಕಗ್ಗಂಟು; ಪೊಲೀಸರಿಗೆ ಸವಾಲು..!

ಬಾಂಬ್ ಬೆದರಿಕೆ ಪತ್ತೆ ಕಗ್ಗಂಟು; ಪೊಲೀಸರಿಗೆ ಸವಾಲು..!

0

ಮೈಸೂರು : ‘‘ನಿಮ್ಮ ಕಚೇರಿಯಲ್ಲಿ ಬಾಂಬ್‌ ಇಡಲಾಗಿದೆ. ಇಷ್ಟೊತ್ತಿಗೆ ಸ್ಫೋಟಗೊಳ್ಳಲಿದೆ,’’ ಹೀಗೆ ಬರುತ್ತಿದ್ದ, ಬಾಂಬ್‌ ಬೆದರಿಕೆ ಕರೆಗಳು ಈಗ ಇ-ಮೇಲ್‌ ಸಂದೇಶದ ಮೂಲಕ ಬರುತ್ತಿರುವುದು ಹೆಚ್ಚಾಗಿದೆ. ಈ ರೀತಿ ಹುಸಿ ಬಾಂಬ್‌ ಬೆದರಿಕೆ ಸಂದೇಶಗಳನ್ನು ಕಳುಹಿಸುವವರನ್ನು ಪತ್ತೆ ಮಾಡುವುದೇ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.

ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಹುಸಿ ಬಾಂಬ್‌ ಬೆದರಿಕೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪತ್ತೆ ಮಾಡಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ರಾಜ್ಯದಲ್ಲಿ ಬೆಂಗಳೂರು, ಮಂಗಳೂರು ಬಳಿಕ ಅತಿ ಹೆಚ್ಚು ಬೆದರಿಕೆ ಕರೆಗಳು ಮೈಸೂರು ನಗರದಲ್ಲಿ ಬಂದಿದ್ದು, ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ. ಕಿಡಿಗೇಡಿಗಳ ಈ ಬೆದರಿಕೆ ದುಷ್ಕೃತ್ಯಗಳಿಗೆ ಕಡಿವಾಣವಿಲ್ಲದಂತೆ ಆಗಿದೆ. ಕಳೆದ ಏಳು ವರ್ಷಗಳಲ್ಲಿ 33 ಬಾಂಬ್‌ ಬೆದರಿಕೆ ಸಂದೇಶಗಳು ಬಂದಿದ್ದು, ಈ ಸಂಬಂಧ ಪತ್ತೆಯಾಗಿರುವುದು ಕೇವಲ ಒಂದು ಪ್ರಕರಣ ಮಾತ್ರವಾಗಿದೆ.

ಸಮಾಜದಲ್ಲಿ ಶಾಂತಿ-ನೆಮ್ಮದಿಯನ್ನು ಕದಡುವ ಉದ್ದೇಶದಿಂದ ಕಿಡಿಗೇಡಿಗಳು ನ್ಯಾಯಾಲಯ ಸೇರಿದಂತೆ ಸರಕಾರಿ ಕಚೇರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್‌ ಇಡಲಾಗಿದೆ ಎಂದು ಬೆದರಿಕೆ ಕರೆಗಳನ್ನು ಮಾಡುತ್ತಿದ್ದು, ಇತ್ತೀಚೆಗೆ ಈ ಪ್ರವೃತ್ತಿ ಹೆಚ್ಚಾಗಿದೆ. ಇವರ ಉದ್ದೇಶ ಸ್ಫೋಟ ನಡೆಸುವುದು ಅಲ್ಲದಿದ್ದರೂ ಸಮಾಜದಲ್ಲಿ ಗೊಂದಲವುಂಟು ಮಾಡುವ ಪ್ರವೃತ್ತಿಯಾಗಿದೆ. ಇಂತಹವರನ್ನು ಪತ್ತೆ ಹಚ್ಚಿ ಜೈಲಿಗಟ್ಟುವುದೇ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.

ಮೈಸೂರು ನಗರದಲ್ಲಿ ಕೋರ್ಟ್‌ಗಳಲ್ಲಿ ಬಾಂಬ್‌ ಇಡಲಾಗಿದೆ ಎಂಬ ಬೆದರಿಕೆ ಸಂದೇಶಗಳು ಅತಿ ಹೆಚ್ಚು ಬರುತ್ತಿದ್ದು, ಪ್ರತಿ ಬಾರಿಯೂ ಬೆದರಿಕೆ ಸಂದೇಶ ಗಮನಕ್ಕೆ ಬಂದಾಗಲೂ ಕೋರ್ಟ್‌ ಕಾರ್ಯ ಕಲಾಪಗಳನ್ನು ಸ್ಥಗಿತಗೊಳಿಸಿ ನ್ಯಾಯವಾದಿಗಳೊಂದಿಗೆ ಸಾರ್ವಜನಿಕರನ್ನು ಹೊರ ಕಳುಹಿಸಿ ಬಾಂಬ್‌ ಪತ್ತೆ ದಳದೊಂದಿಗೆ ಶ್ವಾನ ದಳದ ಸಿಬ್ಬಂದಿ ಸಂಪೂರ್ಣ ತಪಾಸಣಾ ಕಾರ್ಯ ನಡೆಸಿ ಬೆದರಿಕೆ ಸಂದೇಶವು ಹುಸಿ ಎಂದು ನಿರ್ಧಾರವಾದ ಮೇಲೆಯೇ ಮತ್ತೆ ಕೋರ್ಟ್‌ ಕಾರ್ಯ ಕಲಾಪ ಆರಂಭಗೊಳ್ಳುತ್ತಿವೆ. ಇತ್ತೀಚೆಗೆ ಇಂತಹ ಬೆದರಿಕೆ ಸಂದೇಶಗಳು ಕೋರ್ಟ್‌ಗೆ ಬರುವುದೇ ಹೆಚ್ಚಾಗಿದೆ ಎನ್ನುತ್ತಾರೆ ಪೊಲೀಸ್‌ ಅಧಿಕಾರಿಯೊಬ್ಬರು.

ಮೈಸೂರು ನಗರದಲ್ಲಿ ಬಾಂಬ್‌ ಬೆದರಿಕೆ ಕರೆ ಅಥವಾ ಇಮೇಲ್‌ ಸಂದೇಶ ಬಂದ ತಕ್ಷಣ ಎಚ್ಚೆತ್ತುಕೊಳ್ಳುವ ಮೈಸೂರು ನಗರ ಪೊಲೀಸರು, ಬಾಂಬ್‌ ಪತ್ತೆ ದಳ, ಶ್ವಾನ ದಳದ ಸಿಬ್ಬಂದಿಯೊಂದಿಗೆ ತಕ್ಷಣ ಕಾರ್ಯ ಪ್ರವೃತ್ತರಾಗಿ, ಶೋಧ ಕಾರ್ಯ ನಡೆಸುತ್ತಿದ್ದಾರೆ. ಯಾವುದೇ ಸ್ಪೋಟಕ ವಸ್ತು ಸಿಗದೇ ಇರುವುದನ್ನು ಖಚಿತಪಡಿಸಿಕೊಂಡು ಹುಸಿ ಬಾಂಬ್‌ ಕರೆ ಅಥವಾ ಸಂದೇಶ ಘೋಷಣೆ ಮಾಡುವ ಮೂಲಕ ಸಾರ್ವಜನಿಕರಲ್ಲಿನ ಮೂಡಿದ್ದ ಆತಂಕವನ್ನು ದೂರ ಮಾಡುತ್ತಿದ್ದಾರೆ.

ಕರೆ ಬಳಿಕ ಇದುವರೆವಿಗೂ ಯಾವುದೇ ಸ್ಫೋಟಕ ವಸ್ತು ಸಿಕ್ಕಿರುವುದು ಮತ್ತು ಸ್ಫೋಟದ ಘಟನೆ ನಡೆದಿಲ್ಲಎಂಬುದು ಪೊಲೀಸರಿಗೆ ಸಮಾಧಾನ ತಂದಿದೆ. ನಿತ್ಯ ಶೋಧ ಕಾರ್ಯ: ಪ್ರವಾಸಿ ತಾಣವಾದ ಮೈಸೂರು ನಗರದ ಪ್ರಮುಖ ಸ್ಥಳಗಳಲ್ಲಿ ಪ್ರವಾಸಿಗರ ಹಿತ ದೃಷ್ಟಿಯಿಂದ ಅರಮನೆ, ಚಾಮುಂಡಿ ಬೆಟ್ಟ, ಮೃಗಾಲಯ ಸೇರಿದಂತೆ ರೈಲು ನಿಲ್ದಾಣ, ಬಸ್‌ ನಿಲ್ದಾಣಗಳಲ್ಲಿ ನಿತ್ಯ ಬಾಂಬ್‌ ಪತ್ತೆ ದಳದೊಂದಿಗೆ ಶ್ವಾನ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸುವುದು ಸಾಮಾನ್ಯವಾಗಿದೆ. ಜತೆಗೆ ಗಣ್ಯರ ಆಗಮನದ ವೇಳೆಯು ಸಹ ಶೋಧ ಕಾರ್ಯ ಇರುತ್ತದೆ.