ನವದೆಹಲಿ: ದೆಹಲಿಯ ಹಲವು ಶಾಲೆಗಳಿಗೆ ಇಂದು (ಮಂಗಳವಾರ) ಬೆಳಿಗ್ಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ವಾರದಲ್ಲಿ ರಾಷ್ಟ್ರ ರಾಜಧಾನಿಯ ವಿವಿಧ ಶಾಲೆಗಳಿಗೆ ಬೆದರಿಕೆ ಸಂದೇಶ ಕಳುಹಿಸಿದ ನಾಲ್ಕನೇ ಪ್ರಕರಣ ಇದಾಗಿದೆ.
ದೆಹಲಿಯ ಹಲವು ಶಾಲೆಗಳಿಗೆ ಇಂದು (ಮಂಗಳವಾರ) ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿರುವುದಾಗಿ ಸುದ್ದಿಸಂಸ್ಥೆ ‘ಎಎನ್ಐ’ ವರದಿ ಮಾಡಿದೆ.
ದಕ್ಷಿಣ ದೆಹಲಿಯ ಇಂಡಿಯನ್ ಪಬ್ಲಿಕ್ ಸ್ಕೂಲ್ ಮತ್ತು ವಾಯವ್ಯ ದೆಹಲಿಯ ಸರಸ್ವತಿ ವಿಹಾರ್ನಲ್ಲಿರುವ ಶಾಲೆಯೊಂದಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದ ಕುರಿತು ಮಾಹಿತಿ ನೀಡಿದರು. ತಕ್ಷಣವೇ ಆಗ್ನಿಶಾಮಕ ಇಲಾಖೆ, ಸ್ಥಳೀಯ ಪೊಲೀಸರು, ಶ್ವಾನಪಡೆ, ಬಾಂಬ್ ನಿಗ್ರಹ ತಂಡಗಳು ಸ್ಥಳಕ್ಕೆ ಧಾವಿಸಿ ಶೋಧ ನಡೆಸಲಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯ ಆರು ಶಾಲೆಗಳಿಗೆ ಶನಿವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಲಾಗಿತ್ತು. ಆದೇ ರೀತಿ ಶುಕ್ರವಾರ ನಸುಕಿನಲ್ಲಿ ದೆಹಲಿಯ ಸುಮಾರು 30 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶಗಳು ಬಂದಿದ್ದವು.
ಡಿಸೆಂಬರ್ 9ರಂದು ದೆಹಲಿಯ 44 ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಮೇ ತಿಂಗಳಲ್ಲಿ 250ಕ್ಕೂ ಅಧಿಕ ಶಾಲೆಗಳು, ಆಸ್ಪತ್ರೆ ಮತ್ತು ಇತರೆ ಸಂಸ್ಥೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು.