ತಮಗೆ ಡಿಫಾಲ್ಟ್ ಜಾಮೀನು ನೀಡಲು ನಿರಾಕರಿಸಿದ್ದ ಹೈಕೋರ್ಟ್‌ನ ಡಿಸೆಂಬರ್ 2021ರ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಭೀಮಾ ಕೋರೆಗಾಂವ್ ಪ್ರಕರಣದ ಮೂವರು ಆರೋಪಿಗಳಾದ ವರವರರಾವ್, ಅರುಣ್ ಫೆರೇರಾ ಮತ್ತು ವರ್ನಾನ್ ಗೊನ್ಸಾಲ್ವೆಸ್ ಅವರು ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ.
[ಪಿ ವರವರ ರಾವ್ ಮತ್ತಿತರರು ಹಾಗೂ ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಆರೋಪಿಗಳು ತಿಳಿಸಿದ್ದಂತೆ ತೀರ್ಪಿನಲ್ಲಿ ಯಾವುದೇ ವಾಸ್ತವಿಕ ದೋಷವಿಲ್ಲ ಎಂದು ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಎನ್ ಜೆ ಜಾಮದಾರ್ ಅವರಿದ್ದ ಪೀಠ ವಿವರಿಸಿದೆ.
“ಜಾಮೀನಿನ ಅರ್ಜಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿರಲಿಲ್ಲ. ಆದ್ದರಿಂದ ವಾಸ್ತವಿಕ ದೋಷವಿದೆ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಧಿಕಾರವ್ಯಾಪ್ತಿ ಚಲಾಯಿಸುವ ಯಾವುದೇ ಅಂಶಗಳು ಇಲ್ಲ. ತೀರ್ಪಿನಲ್ಲಿನ ಅವಲೋಕನಗಳು ಸಲ್ಲಿಸಲಾಗಿದ್ದ ದಾಖಲೆಗಳನ್ನು ಆಧರಿಸಿವೆ ಎಂದು ನಾವು ಸ್ಪಷ್ಟಪಡಿಸುತ್ತೇವೆ. ಅರ್ಜಿಯನ್ನು ತಿರಸ್ಕರಿಸಲಾಗಿದೆ,” ಎಂದು ಪೀಠ ತೀರ್ಪು ನೀಡಿದೆ.
ಸಹ ಆರೋಪಿ, ವಕೀಲೆ ಸುಧಾ ಭಾರದ್ವಾಜ್ ಹೊರತುಪಡಿಸಿ ಎಂಟು ಆರೋಪಿಗಳಿಗೆ ಹೈಕೋರ್ಟ್ ಡಿಸೆಂಬರ್ 1, 2021 ರಂದು ಜಾಮೀನು ನಿರಾಕರಿಸಿತ್ತು. ಹೈಕೋರ್ಟ್ ಜಾಮೀನು ನಿರಾಕರಣೆಯ ತೀರ್ಪಿನಲ್ಲಿ ವಾಸ್ತವಿಕ ದೋಷವಿದ್ದು ಅದನ್ನು ಸರಿಪಡಿಸದಿದ್ದರೆ ಗಂಭೀರ ನ್ಯಾಯಭಂಗವಾಗುತ್ತದೆ ಎಂದು ವರವರರಾವ್, ಫೆರೇರಾ ಹಾಗೂ ಗೊನ್ಸಾಲ್ವೆಸ್ ಅವರು ಸಲ್ಲಿಸಿದ್ದ ಅರ್ಜಿ ತಿಳಿಸಿತ್ತು.