ಮನೆ ಕಾನೂನು ಬಾಂಬೆ ಹೈಕೋರ್ಟ್’ನ ನಿರ್ಭೀತ ನಿಲುವಿನಿಂದಾಗಿ ತುರ್ತು ಪರಿಸ್ಥಿತಿ ವೇಳೆ ಪ್ರಜಾಪ್ರಭುತ್ವ ಉಳಿಯಿತು: ಸಿಜೆಐ

ಬಾಂಬೆ ಹೈಕೋರ್ಟ್’ನ ನಿರ್ಭೀತ ನಿಲುವಿನಿಂದಾಗಿ ತುರ್ತು ಪರಿಸ್ಥಿತಿ ವೇಳೆ ಪ್ರಜಾಪ್ರಭುತ್ವ ಉಳಿಯಿತು: ಸಿಜೆಐ

0

ಬಾಂಬೆ ಹೈಕೋರ್ಟ್’ನ ನಿರ್ಭೀತ ಸ್ವಾತಂತ್ರ್ಯ ಮನೋಭಾವವು ತುರ್ತು ಪರಿಸ್ಥಿತಿ  ವೇಳೆ ಭಾರತೀಯ ಪ್ರಜಾಪ್ರಭುತ್ವವನ್ನು ಉಳಿಸಿತು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಶನಿವಾರ ಶ್ಲಾಘಿಸಿದರು.

ಸಿಜೆಐ ಹುದ್ದೆಗೇರಿದ ಅವರಿಗೆ ಬಾಂಬೆ ಹೈಕೋರ್ಟ್’ನಲ್ಲಿ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭದ ವೇಳೆ ಅವರು ಮಾತನಾಡಿದರು. 

ಅಂದು ನಿರ್ಭೀತ ಪ್ರಜ್ಞೆ ಮೂಡಿಸಿದ್ದ ನ್ಯಾಯಮೂರ್ತಿಗಳಾದ ಆರ್ ಎಂ ಕಾಂತವಾಲಾ ಮತ್ತು ವಿ ಡಿ ತುಳಜಾಪುರ್’ಕರ್ ಸೇರಿದಂತೆ ನ್ಯಾಯಮೂರ್ತಿಗಳು ಹಾಗೂ ವಕೀಲ ವರ್ಗದ ಹೆಸರುಗಳನ್ನು ಅವರು ಸ್ಮರಿಸಿದರು.

 “ತುರ್ತು ಪರಿಸ್ಥಿತಿ ವೇಳೆ ಸಂವಿಧಾನದ  21ನೇ ವಿಧಿಯನ್ನು ಅಮಾನತಿನಲ್ಲಿಟ್ಟಾಗಲೂ ಹೇಬಿಯಸ್ ಕಾರ್ಪಸ್ ರಿಟ್ ಲಭ್ಯ ಇರಬೇಕು ಎಂದು ಹೇಳಿದ ನ್ಯಾಯಮೂರ್ತಿಗಳು ಅವರು” ಎಂದು ಸಿಜೆಐ ನೆನೆದರು.

ಬಾಂಬೆ ಹೈಕೋರ್ಟ್ ಮತ್ತು ಅದರ ನ್ಯಾಯಾಧೀಶರು ಸ್ವಾತಂತ್ರ್ಯ ಎತ್ತಿಹಿಡಿಯಲು ಒಗ್ಗೂಡಿದ ಅಚಲ ನಿಲುವಿನಿಂದಾಗಿ ಭಾರತೀಯ ಪ್ರಜಾಪ್ರಭುತ್ವ ಇನ್ನೂ ದೃಢವಾಗಿ ನಿಂತಿದೆ ಎಂದು ಸಿಜೆಐ ಮೆಚ್ಚುಗೆ ವ್ಯಕ್ತಪಡಿಸಿದರು.

ಅಲ್ಲದೆ ಬಾಂಬೆ ಹೈಕೋರ್ಟ್ ಜೊತೆ ನಂಟು ಹೊಂದಿದ್ದ ಬಾಲಗಂಗಾಧರ ತಿಲಕ್ ಮತ್ತು ಡಾ ಬಿ ಆರ್ ಅಂಬೇಡ್ಕರ್ ಅವರನ್ನು ಕೂಡ ಇದೇ ಸಂದರ್ಭದಲ್ಲಿ ಅವರು ನೆನೆದರು. ತಿಲಕ್ ಅವರ ವಿರುದ್ಧದ ಐತಿಹಾಸಿಕ ದೇಶದ್ರೋಹದ ವಿಚಾರಣೆ 1897 ಮತ್ತು 1908ರಲ್ಲಿ ಇದೇ ನ್ಯಾಯಾಲಯದ ಆವರಣದಲ್ಲಿ ನಡೆದಿತ್ತು ಎನ್ನುವುದನ್ನು ನೆನಪಿಸಿದ ಅವರು, ಸೆಂಟ್ರಲ್ ಕೋರ್ಟ್ನಲ್ಲಿರುವ ತಿಲಕ್ ಅವರಿಗೆ ಸಂಬಂಧಿಸಿದ ಫಲಕವನ್ನು ಪ್ರಸ್ತಾಪಿಸಿದರು. ಅದು ಈ ನ್ಯಾಯಾಲಯದ ನಿರ್ಭೀತ ಮನೋಭಾವದ ಹೆಗ್ಗುರುತು ಎಂದು ಅವರು ಸ್ಮರಿಸಿದರು.

ಬಾಂಬೆ ಹೈಕೋರ್ಟ್ನ ಖ್ಯಾತ ನ್ಯಾಯಶಾಸ್ತ್ರಜ್ಞರಾದ ಡಾ ಪಾಂಡುರಂಗ ವಾಮನ್ ಕೇನ್, ಡಾ ಬಿ ಆರ್ ಅಂಬೇಡ್ಕರ್, ಫಿರೋಜ್ಶಾ ಮೆಹ್ತಾ, ಕೆ ಎಂ ಮುನ್ಷಿ, ಎಚ್ ಎಂ ಸರ್ವೈ, ನಾನಿ ಪಾಲ್ಖಿವಾಲಾ ಹಾಗೂ ರೋಷನ್ ದಳವಿ ಅವರಿಗೆ ಋಣ ಸಂದಾಯ ಮಾಡುವ ಅಗತ್ಯವಿದೆ ಎಂದು ಅವರು ತಿಳಿಸಿದರು.

ಹಿಂದಿನ ಲೇಖನಮಂಕಣಕ
ಮುಂದಿನ ಲೇಖನಮಂಡ್ಯ ಬಂದ್’ಗೆ ಉತ್ತಮ ಪ್ರತಿಕ್ರಿಯೆ