ಮೈಸೂರು: ಕೆಎಸ್’ಡಿಎಲ್ ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬಸವರಾಜ ಬೊಮ್ಮಾಯಿ ರಕ್ಷಿಸುತ್ತಿದ್ದಾರೆ. ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಹೇಳಿದರು.
ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ಅವರಿಗೆ ನೈತಿಕತೆ ಇದ್ದಿದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕಿತ್ತು ಎಂದರು.
ಬಿಜೆಪಿ ಶಾಸಕನ ಮನೆಯಲ್ಲಿ ಎಂಟು ಕೋಟಿ ರೂಪಾಯಿ ನಗದು ಸಿಕ್ಕಿದೆ. ಭ್ರಷ್ಟಾಚಾರ ಮಾಡಿರುವುದಕ್ಕೆ ಇದಕ್ಕಿಂತಲೂ ಹೆಚ್ಚಿನ ಪುರಾವೆ ಬೇಕಾಗಿಲ್ಲ. ಆದರೂ ಮುಖ್ಯಮಂತ್ರಿ ಹಾಗೂ ಬಿಜೆಪಿಯವರು ಸಮರ್ಥನೆಗೆ ಇಳಿದಿದ್ದಾರೆ ಎಂದು ಟೀಕಿಸಿದರು.
ಲೋಕಾಯುಕ್ತ ಮುಚ್ಚಿದ ಕಾಂಗ್ರೆಸ್’ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಅವರಿಗೆ ಮಾಹಿತಿ ಕೊರತೆ ಇರುವುದರಿಂದಲೇ ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಲೋಕಾಯುಕ್ತದ ಅಧಿಕಾರವನ್ನು ಮೊಟಕುಗೊಳಿಸಿಲ್ಲ ಎಂದು ಪ್ರತಿಕ್ರಿಯಿಸಿದರು.