ಲಂಡನ್: ಕನ್ನಡದ ಪ್ರಸಿದ್ಧ ಸಾಹಿತಿ ಬಾನು ಮುಷ್ತಾಕ್ ಅವರು ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಮೂಲಕ ಬೂಕರ್ ಪ್ರಶಸ್ತಿ ಪಡೆದ ಕನ್ನಡದ ಮೊದಲ ಸಾಹಿತಿ ಎಂಬ ಹೆಗ್ಗಳಿಕೆಗೆ ಬಾನು ಮುಷ್ತಾಕ್ ಪಾತ್ರರಾಗಿದ್ದಾರೆ. ‘ಹಾರ್ಟ್ ಲ್ಯಾಂಪ್’ ಎಂಬ ಕೃತಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಹಾಗಾಗಿ ಕರುನಾಡಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಒಲಿದಿದೆ. ಮಂಗಳವಾರ ಇಂಗ್ಲೆಂಡ್ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಬೂಕರ್ ಪ್ರಶಸ್ತಿ 50 ಸಾವಿರ ಪೌಂಡ್ (ಅಂದಾಜು 57.28 ಲಕ್ಷ ರೂ.) ಒಳಗೊಂಡಿದೆ. ಇದೇ ಅನುವಾದಿತ ಕೃತಿಗೆ ‘ಪೆನ್ ಟ್ರಾನ್ಸ್‌ಲೇಟ್ಸ್’ ಪ್ರಶಸ್ತಿಯೂ ಸಿಕ್ಕಿತ್ತು.
ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರು ಮೂಲತಃ ಹಾಸನದವರು. ಇತ್ತೀಚೆಗೆ ಅಂದರೆ ಫೆಬ್ರುವರಿಯಲ್ಲಿ ಅವರು ಕೃತಿ ಲಾಂಗ್ ಲಿಸ್ಟ್ನಲ್ಲಿ ಆಯ್ಕೆಯಾಗಿತ್ತು. ಬಳಿಕ ಏಪ್ರಿಲ್ 8 ರಂದು ಶಾರ್ಟ್ ಲಿಸ್ಟ್ನಲ್ಲಿ ಸ್ಥಾನ ಪಡೆದಿತ್ತು.
1990 ಮತ್ತು 2023ರ ನಡುವೆ ಪ್ರಕಟಗೊಂಡ 12 ಕತೆಗಳನ್ನೊಳಗೊಂಡ ಈ ಸಂಕಲನವನ್ನು ದೀಪಾ ಭಸ್ತಿ ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದರು. ಮುಸ್ಲಿಂ ಸಮುದಾಯದ ಬಾಲಕಿಯರು ಹಾಗೂ ಹೆಣ್ಣುಮಕ್ಕಳ ದೈನಂದಿನ ಬದುಕನ್ನು ಆಧಾರಿಸಿ ಈ ಕತೆಯನ್ನು ಬರೆಯಲಾಗಿತ್ತು.
ಇಂಗ್ಲೆಂಡ್ನಲ್ಲಿ ನಡೆದ ಸಮಾರಂಭದಲ್ಲಿ ಅನುವಾದಕಿ ದೀಪಾ ಭಸ್ತಿ ಅವರೊಂದಿಗೆ ಹಿರಿಯ ಸಾಹಿತಿ ಬಾನು ಮುಷ್ತಾಕ್ ಪ್ರಶಸ್ತಿ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ತಮ್ಮ ಗೆಲುವನ್ನು ವೈವಿಧ್ಯತೆಯ ಗೆಲುವು ಎಂದು ಬಣ್ಣಿಸಿದ್ದಾರೆ. ‘ಯಾವುದೇ ಕಥೆ ಸಣ್ಣದಲ್ಲ, ಅನುಭವವೆಂಬ ವಸ್ತ್ರದ ಪ್ರತಿಯೊಂದು ಎಳೆಯೂ ಇಡೀ ಕಥೆಯ ತೂಕವನ್ನು ಹೊಂದಿರುತ್ತದೆ ಎಂಬ ನಂಬಿಕೆಯಿಂದ ಈ ಪುಸ್ತಕ ರಚಿಸಲಾಗಿದೆ’ ಎಂದು ಬಾನು ಮುಷ್ತಾಕ್ ಹೇಳಿದ್ದಾರೆ.















