ಬೆಂಗಳೂರು: ಚನ್ನಪಟ್ಟಣ ಟಿಕೆಟ್ ವಿಷಯಕ್ಕೆ ನೆಲದವರೆಗೂ ಬಗ್ಗಿದ್ದೇನೆ. ಇನ್ನೂ ಬಗ್ಗಿ ಎಂದರೆ ಎಲ್ಲಿಗೆ ಬಗ್ಗಲಿ.ನನ್ನ ತಾಳ್ಮೆ, ಸಹನೆಗೂ ಮಿತಿ ಇದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಕಾರ್ಯಕರ್ತರು ಮುಖಂಡರ ಸಭೆಯಲ್ಲಿ ಮಾತನಾಡಿದರು.
ಅಭ್ಯರ್ಥಿ ವಿಷಯದಲ್ಲಿ ಕಾರ್ಯಕರ್ತರ ಭಾವನೆಗಳಿಗೆ ವಿರುದ್ಧವಾಗಿ ನಿರ್ಧಾರ ಕೈಗೊಳ್ಳುವ ಪ್ರಶ್ನೆಯೇ ಇಲ್ಲ. ಈ ರಾಜ್ಯದಲ್ಲಿ ನನ್ನಷ್ಟು ಉಪ ಚುನಾವಣೆಗಳನ್ನು ಎದುರಿಸಿದ, ಯಶಸ್ವಿಯಾಗಿ ನಿಭಾಯಿಸಿದ ವ್ಯಕ್ತಿ ಇನ್ನೊಬ್ಬರಿಲ್ಲ. ಎಂತೆಂತಹ ಚುನಾವಣೆಗಳನ್ನು, ಅಗ್ನಿಪರೀಕ್ಷೆಗಳನ್ನು ಎದುರಿಸಿದ್ದೇನೆ. ಚನ್ನಪಟ್ಟಣ ಚುನಾವಣೆ ಎದುರಿಸುವುದಕ್ಕೆ ನನಗೆ ಭಯವೇ? ಸಾಧ್ಯವೇ ಇಲ್ಲ ಎಂದು ಗುಡುಗಿದರು.
ಸಂಬಂಧ ಹಾಳು ಮಾಡಿಕೊಳ್ಳಲಾರೆ
ನಾನು ಬಗ್ಗಿರುವುದು ಅಧಿಕಾರಕ್ಕಾಗಿ ಅಲ್ಲ.ವೈಯಕ್ತಿಕವಾಗಿ ನಾನು ಮಾಡದಿರುವ ತಪ್ಪಿಗೆ ತಲೆಕೊಟ್ಟಿದ್ದೇನೆ.ಈ ದೇಶದಲ್ಲಿ ಕಾಂಗ್ರೆಸ್‌ನ್ನು ಮೂಲೋತ್ಪಾಟನೆ ಮಾಡಬೇಕು ಎನ್ನುವ ಪ್ರಧಾನಿ ಮೋದಿ ಸಂಕಲ್ಪಕ್ಕೆ ಹೆಗಲಾಗಿ ನಿಂತಿದ್ದೇನೆ ಎಂದು ಹೇಳಿದರು.
ಜೆಡಿಎಸ್ ನಿಂದಲೇ ಟಿಕೆಟ್ ನವದೆಹಲಿಯಲ್ಲಿ ಭೇಟಿಯಾಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಯೋಗೇಶ್ವರ್‌ಗೆ ರಾಜೀನಾಮೆ ಕೊಟ್ಟು ಜೆಡಿಎಸ್ ನಿಂದ ಚುನಾವಣೆಗೆ ನಿಲ್ಲುವುದಕ್ಕೆ ಹೇಳುತ್ತೇವೆ ಎಂದು ಹೇಳಿದ್ದರು. ನಾನು ಈ ಸಂಬಂಧ ಉಳಿಯಬೇಕು, ಒಂದು ಸ್ಥಾನ ಮುಖ್ಯವಲ್ಲ, ಎನ್‌ಡಿಎ ಮೈತ್ರಿ ಗೆಲ್ಲಬೇಕು ಎಂದು ಹೇಳುತ್ತಲೇ ಇದ್ದೇನೆ. ಮೋದಿ, ಅಮಿತ್ ಶಾ, ನಡ್ಡಾ ಅವರಂತಹ ನಾಯಕರ ಜತೆ ಸಂಬಂಧ ಕಡಿದುಕೊಳ್ಳಬೇಕಾ? ಎಂದು ಕಿಡಿಕಾರಿದರು.
ಕಾರ್ಯಕರ್ತರ ಭಾವನೆಗೆ ಧಕ್ಕೆ ಆಗದಂತೆ ನಿರ್ಧಾರ ಮಾಡುತ್ತೇನೆ. ಕಾರ್ಯಕರ್ತರು ಒಟ್ಟಾಗಿರಿ, ಯಾರಿಗೂ ತಲೆಬಾಗಬೇಕಿಲ್ಲ. ಇನ್ನು ಮೂರು ದಿನ್ ಸಮಯ ಇದೆ. ನನ್ನ ಕಾರ್ಯಕರ್ತರ ಭಾವನೆಯೇ ಅಂತಿಮ. ಸಮಯ ಕೊಡಿ ಎಂದು ಕುಮಾರಸ್ವಾಮಿ ಮನವಿ ಮಾಡಿಕೊಂಡರು.
ಭಾಷಣ ಮೊಟಕುಗೊಳಿಸಿದ ಎಚ್‌ಡಿಕೆ
ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ಟಿಕೆಟ್ ಕೊಡಬೇಕು, ಯಾವುದೇ ಕಾರಣಕ್ಕೂ ಯೋಗೇಶ್ವರ್ ಅವರಿಗೆ ಕೊಡಬಾರದು ಎಂದು ಚನ್ನಪಟ್ಟಣ ಕಾರ್ಯಕರ್ತರು ಗದ್ದಲ ಎಬ್ಬಿಸಿದರು. ನಿಖಿಲ್ ಕುಮಾರಸ್ವಾಮಿ ಅವರು ಭಾಷಣ ಮಾಡುವಾಗಲೂ ಪದೇಪದೆ ಅಡ್ಡಿಪಡಿಸಿ ನಿಖಿಲ್ ಅವರ ಹೆಸರನ್ನು ಘೋಷಣೆ ಮಾಡುವಂತೆ ಒತ್ತಾಯಿಸಿದರು.
ಒಂದು ವೇಳೆ ನೀವು ನಿಖಿಲ್ ಅವರನ್ನು ಬಿಟ್ಟು ಯೋಗೇಶ್ವರ್‌ಗೆ ಮಣೆ ಹಾಕಿದರೆ ನಮ್ಮ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂದು ಕಾರ್ಯಕರ್ತರು ಹಠ ಹಿಡಿದರು.
ಕಾರ್ಯಕರ್ತರ ಕೂಗಾಟ, ಆಕ್ರೋಶದ ಕಾರಣದಿಂದ ಕುಮಾರಸ್ವಾಮಿ ಅವರು ಭಾಷಣ ಮುಂದುವರಿಸಲು ಆಗದೆ ಕುಮಾರಸ್ವಾಮಿ ಭಾಷಣ ಮೊಟಕು ಮಾಡಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಚನ್ನಪಟ್ಟಣ ತಾಲೂಕು ಅಧ್ಯಕ್ಷ ಜಯಮುತ್ತು, ಹಾಪಕಾಮ್ಸ್ ದೇವರಾಜು, ಹಿರಿಯ ಮುಖಂಡ ಪ್ರಸನ್ನ, ಜಯರಾಂ ಮುಂತಾದವರು ಉಪಸ್ಥಿತರಿದ್ದರು.