ಮನೆ ಕಾನೂನು ಸ್ತನ ಕ್ಯಾನ್ಸರ್ ಔಷಧ ಅತಿ ದುಬಾರಿ: ವಿಷಯ ಗಂಭೀರವಾಗಿ ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದ ಕೇರಳ...

ಸ್ತನ ಕ್ಯಾನ್ಸರ್ ಔಷಧ ಅತಿ ದುಬಾರಿ: ವಿಷಯ ಗಂಭೀರವಾಗಿ ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದ ಕೇರಳ ಹೈಕೋರ್ಟ್

0

ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿದ ʼರಿಬೋಸಿಕ್ಲಿಬ್ʼ ಔಷಧ ದುಬಾರಿ ಬೆಲೆಗೆ ಮಾರಾಟವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸುವಂತೆ ಕೇಂದ್ರ ಸರ್ಕಾರ ಮತ್ತು ಸಂಬಂಧಪಟ್ಟ ಸಚಿವಾಲಯಗಳಿಗೆ ಕೇರಳ ಹೈಕೋರ್ಟ್‌ ಇತ್ತೀಚೆಗೆ ಸೂಚಿಸಿದೆ.

 “ಲಭ್ಯವಿರುವ ಅಂಕಿ ಸಂಖ್ಯೆಗಳ ಪ್ರಕಾರ ದುಬಾರಿ ಚಿಕಿತ್ಸೆ ಮತ್ತು ಔಷಧ ಪಡೆಯಲಾಗದೆ ಸ್ತನ ಕ್ಯಾನ್ಸರ್‌ಗೆ ಬಲಿಯಾಗುತ್ತಿರುವ ಮಹಿಳೆಯರ ಸಂಖ್ಯೆ ಆತಂಕಕಾರಿಯಾಗಿ ಹೆಚ್ಚಾಗಿದೆ. ಸಾರ್ವಜನಿಕ ಆರೋಗ್ಯ ಸುಧಾರಿಸುವ ಸರ್ಕಾರದ ಕರ್ತವ್ಯದೊಂದಿಗೆ ಸಂವಿಧಾನ ಒದಗಿಸಿರುವ ಬದುಕುವ ಹಕ್ಕು ಮಿಳಿತಗೊಂಡಿದ್ದು ಈ ವಿಷಯದಲ್ಲಿ ತುರ್ತು ಮತ್ತು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕಿದೆ” ಎಂದು ಎರ್ನಾಕುಲಂನ ಕೇರಳ ಹೈಕೋರ್ಟ್‌ ನ್ಯಾಯಮೂರ್ತಿ ವಿ ಜಿ ಅರುಣ್‌ ತಮ್ಮ ಮಧ್ಯಂತರ ಆದೇಶದಲ್ಲಿ ತಿಳಿಸಿದ್ದಾರೆ.

ಬ್ಯಾಂಕೊಂದರ ನಿವೃತ್ತ ನೌಕರೆಯಾಗಿರುವ ಅರ್ಜಿದಾರರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಅವರ ಪತಿ ಕೂಡ ಬ್ಯಾಂಕ್‌ ಉದ್ಯೋಗಿಯಾಗಿದ್ದು ನಿವೃತ್ತಿಯ ನಂತರ ಅವರಿಬ್ಬರ ಮಾಸಿಕ ಆದಾಯ ರೂ 74,000ದಷ್ಟಿದೆ. ಅವರು ಚಿಕಿತ್ಸೆಗಾಗಿ ಬಳಸುತ್ತಿದ್ದ ರಿಬೋಸಿಕ್ಲಿಬ್ ಔಷಧವೊಂದರ ಬೆಲೆಯೇ ರೂ 58,140 ರೂಗಳಾಗಿದ್ದು ಉಳಿದ ಚಿಕಿತ್ಸೆಯ ವೆಚ್ಚವೂ ಸೇರಿ ರೂ 68,000ಕ್ಕೂ ಹೆಚ್ಚು ಹಣ ಖರ್ಚಾಗುತ್ತಿದೆ. ಹೀಗಾಗಿ ದಂಪತಿಯ ಆದಾಯದ ಬಹುಪಾಲು ವೈದ್ಯಕೀಯ ವೆಚ್ಚಕ್ಕೆ ಸರಿಹೋಗುತ್ತಿತ್ತು. ಅರ್ಜಿದಾರರಿಗೆ ತಗುಲಿರುವ ಕ್ಯಾನ್ಸರ್‌ ಗುಣಪಡಿಸುವಂತದ್ದಲ್ಲ. ಗುಣಪಡಿಸಿದರೂ ಮತ್ತೆ ಅದು ದಾಳಿ ಮಾಡುವ ಸಂಭವವಿದೆ. ಹೀಗಾಗಿ ಅವರು ಜೀವನ ಪೂರ್ತಿ ಔಷಧವನ್ನು ಸೇವಿಸುತ್ತಲೇ ಇರಬೇಕಿದೆ.

ಅರ್ಜಿದಾರರ ಪರವಾಗಿ ರಿಟ್‌ ಅರ್ಜಿ ಸಲ್ಲಿಸಿದ್ದ ಕರ್ನಾಟಕ ಮೂಲದ ವಕೀಲೆ ಮೈತ್ರೇಯಿ ಸಚ್ಚಿದಾನಂದ ಹೆಗ್ಡೆ “ರಿಬೋಸಿಕ್ಲಿಬ್ʼ ಔಷಧದ ಪೇಟೆಂಟ್‌ ಅರ್ಜಿದಾರರಿಗೆ ಸಂವಿಧಾನದತ್ತವಾಗಿ ಒದಗಿಸಲಾದ ಜೀವಿಸುವ ಹಕ್ಕಿಗೆ ವಿರುದ್ಧವಾಗಿದೆ” ಎಂದಿದ್ದರು.

ಆದರೆ ರಿಬೋಸಿಕ್ಲಿಬ್ ಔಷಧ ಪೇಟೆಂಟ್‌ ಏಕಸ್ವಾಮ್ಯ ಹೊಂದಿರುವುದರಿಂದ ಪೈಪೋಟಿಯೇ ಇಲ್ಲದಂತಾಗಿ ಅದರ ದರ ಕೈಗೆಟುಕದಂತಾಗಿದೆ. ಈ ಕೈಗೆಟುಕದ ದರ ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಮೂಲಭೂತ ಹಕ್ಕಾದ ಆರೋಗ್ಯದ ಹಕ್ಕಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ ನ್ಯಾಯಾಲಯ ಮಧ್ಯಪ್ರವೇಶಿಸಿ ಜೀವರಕ್ಷಕ ಮದ್ದಾದ ರಿಬೋಸಿಕ್ಲಿಬ್ ಔಷಧ ಎಲ್ಲರಿಗೂ ದೊರೆಯುವಂತೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು. ಆ ಮೂಲಕ ಅರ್ಜಿದಾರರರಿಗೆ ಒದಗಿಸಲಾದ ಮೂಲಭೂತ ಹಕ್ಕನ್ನು ಖಾತ್ರಿಪಡಿಸಬೇಕು ಎಂದು ಮೈತ್ರೇಯಿ ಕೋರಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲದಯದಡಿ ಬರುವ ಔಷಧೀಯ ಇಲಾಖೆ ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಸಚಿವಾಲಯದ ಕಾರ್ಯದರ್ಶಿ, ಪೇಟೆಂಟ್ಸ್‌ ಡಿಸೈನ್ಸ್‌ ಹಾಗೂ ಟ್ರೇಡ್‌ಮಾರ್ಕ್ಸ್‌ನ ಮಹಾ ನಿಯಂತ್ರಕರು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನಿರ್ದೇಶಕರನ್ನು ಕೂಡ ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.

ಈ ಹಿನ್ನೆಲೆಯಲ್ಲಿ 1970ರ ಪೇಟೆಂಟ್‌ ಕಾಯಿದೆ ಸೆಕ್ಷನ್‌ 100ರ ಅಡಿ ರಿಬೋಸಿಕ್ಲಿಬ್ ಔಷಧಿಯ ಸರ್ಕಾರಿ ಬಳಕೆ ಮತ್ತು ಅದನ್ನು ಸ್ಥಳೀಯವಾಗಿ ಉತ್ಪಾದಿಸಿ ಉಚಿತವಾಗಿ ಹಂಚಬೇಕು ಎಂಬ ಅರ್ಜಿದಾರರ ಕೋರಿಕೆಯನ್ನು ಗಣನೆಗೆ ತೆಗೆದುಕೊಂಡು ಉಳಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಆದೇಶ ಹೊರಡಿಸುವಂತೆ ಪ್ರಕರಣದ ಮೂರನೇ ಪ್ರತಿವಾದಿಯಾದ ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಇಲಾಖೆ ಕಾರ್ಯದರ್ಶಿಗೆ ನ್ಯಾಯಾಲಯ ಮಧ್ಯಂತರ ನಿರ್ದೇಶನ ನೀಡಿದೆ. ಆದೇಶವನ್ನು ನಾಲ್ಕು ವಾರದೊಳಗಾಗಿ ಹೊರಡಿಸಬೇಕು ಎಂದು ನ್ಯಾಯಾಲಯ ಗಡುವು ವಿಧಿಸಿದೆ.

ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅವರು ಮೂರನೇ ಪ್ರತಿವಾದಿಗೆ ನ್ಯಾಯಾಲಯದ ಆದೇಶದ ಪ್ರತಿಯನ್ನು ರವಾನಿಸುವಂತೆ ಸೂಚಿಸಿರುವ ಪೀಠ ಪ್ರಕರಣವನ್ನು 18.7.2022ಕ್ಕೆ ಮುಂದೂಡಿದೆ. ಅಷ್ಟರೊಳಗೆ ಪ್ರತಿವಾದಿಗಳು ಪ್ರತಿ ಅಫಿಡವಿಟ್‌ ಅಥವಾ ಹೇಳಿಕೆ ಸಲ್ಲಿಸುವಂತೆಯೂ ಅದು ಸೂಚಿಸಿದೆ.

[ಶ್ರೀಮತಿ XXXXX ಮತ್ತು ಭಾರತ ಒಕ್ಕೂಟ ಮತ್ತಿತರರ ನಡುವಣ ಪ್ರಕರಣ].

ಹಿಂದಿನ ಲೇಖನರಾಷ್ಟ್ರಪತಿ ಚುನಾವಣೆ: ಯಶವಂತ್ ಸಿನ್ಹಾ ವಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಘೋಷಣೆ
ಮುಂದಿನ ಲೇಖನನಟ ದಿಗಂತ್‌ ಕುತ್ತಿಗೆಗೆ ಪೆಟ್ಟು: ಗೋವಾದಿಂದ ಬೆಂಗಳೂರಿಗೆ ಏರ್‌ ಲಿಫ್ಟ್‌